ಸುಳ್ಯ, ಶ್ರೀ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಪಂಚ ಪರ್ವ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮಲೆಕುಡಿಯರಿಗೆ ತಿಂಗಳ ವೇತನ ನೀಡದೇ ಏಕಾಏಕಿ ಕೆಲಸದಿಂದ ವಜಾ ಮಾಡಿದ್ದನ್ನು ಖಂಡಿಸಿ ದೇವಸ್ಥಾನದ ಕಾರ್ಯ ನಿರ್ವಾಹಣಾಧಿಕಾರಿ ವಿರುದ್ದ ಹಿಂದೂ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ದ.ಕ ಜಿಲ್ಲೆಯ ಕಡಬ ತಾಲೂಕಿನ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಪಂಚ ಪರ್ವ ವಿಭಾಗದಲ್ಲಿ ಕಳೆದ ಎರಡೂವರೆ ವರ್ಷದಿಂದ ರಥ ಕಟ್ಟುವುದು, ಪರ್ವ ಸೇವೆ ಸೇರಿ ಹಲವು ಕೆಲಸಗಳನ್ನು 27 ಜನ ಮಲೆಕುಡಿಯರು ಮಾಡುತ್ತಿದ್ದರು. ಆದ್ರೆ ಎರಡು ತಿಂಗಳ ವೇತನ ಕೂಡ ನೀಡದೇ ಏಕಾಏಕಿ ಮಲೆಕುಡಿಯರನ್ನು ಕೆಲಸದಿಂದ ವಜಾ ಮಾಡಿ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಇನ್ನು ಈ ಕುರಿತು ಹಿಂದೂ ಸಂಘಟನೆಯ ಕಾರ್ಯಕರ್ತರು ಆಕ್ರೋಶ ವ್ಯಕ್ತ ಪಡಿಸಿ, ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಬಳಿಕ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ಅವರ ಬಳಿ ಹಿಂದೂ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿ, ಎರಡು ದಿನಗಳ ಒಳಗೆ ಕೆಲಸಕ್ಕೆ ನೇಮಿಸದೇ ಇದ್ರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ದ್ಯ ಹಿಂದೂ ಸಂಘಟನೆಗಳ ಮನವಿ ಹಿನ್ನೆಲೆಯಲ್ಲಿ ಕಾರ್ಯನಿರ್ವಾಹಣಾಧಿಕಾರಿಗೆ ಸೂಚಿಸಿ ವಜಾ ಮಾಡಿರುವ ಮಲೆಕುಡಿಯರನ್ನು ಕೆಲಸಕ್ಕೆ ನೇಮಿಸುವುದಾಗಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ಅವರು ಭರವಸೆಯನ್ನು ನೀಡಿದರು.