ವಿಟ್ಲ,ಮೇ 05 (DaijiworldNews/SM): ಕನ್ಯಾನದ ಗ್ರಾಮದ ಕಣಿಯೂರು ಎಂಬಲ್ಲಿ ನಡೆದ ಹತ್ತನೇ ತರಗತಿ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಾಲಕಿಯ ಮನೆಗೆ ಶರಣ್ ಪಂಪ್ವೆಲ್ ಭೇಟಿ ನೀಡಿದ್ದು, ಇದೊಂದು ವ್ಯವಸ್ಥಿತ ಕೊಲೆಯಾಗಿದ್ದು, ಸಮಗ್ರ ತನಿಖೆ ನಡೆಸುವಂತೆ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಮೂಲತಃ ಸುಳ್ಯ ತಾಲೂಕಿನ ಪಂಜ ನಿವಾಸಿ ಸಂಜೀವ ಅವರ ಪುತ್ರಿ ಆತ್ಮೀಕಾ(14) ಎಂಬಾಕೆ ಕಣಿಯೂರು ಎಂಬಲ್ಲಿರುವ ತನ್ನ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಳು. ಈಕೆ ತನ್ನ ಕುಟುಂಬದೊಂದಿಗೆ ಕನ್ಯಾನ ಗ್ರಾಮದ ಕಣಿಯೂರು ದಿ. ಸುಲೈಮಾನ್ ಹಾಜಿ ಅವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಬುಧವಾರದಂದು ಮನೆಮಂದಿ ಕೆಲಸಕ್ಕೆ ಹೋದಾಗ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈಕೆಗೆ ಸ್ಥಳೀಯ ನಿವಾಸಿ ಶಾಹುಲ್ ಹಮೀದ್ ಎಂಬಾತ ನಿರಂತರ ಕಿರುಕುಳ ನೀಡಿದ ಆರೋಪದಲ್ಲಿ ಆತನ ವಿರುದ್ಧ ಪ್ರಕರಣ ದಾಖಲಾಗಿತ್ತು.
ಬಾಲಕಿ ಮನೆಗೆ ಭೇಟಿ ನೀಡಿದ ಶರಣ್ ಪಂಪ್ವೆಲ್ ನೇತೃತ್ವದ ನಿಯೋಗ ಬಾಲಕಿಯ ಮನೆಯವರೊಂದಿಗೆ ಮಾತುಕತೆ ನಡೆಸಿದರು. ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಶರಣ್ ಪಂಪ್ವೆಲ್ ಇದೊಂದು ವ್ಯವಸ್ಥಿತ ಕೊಲೆಯಾಗಿದ್ದು, ಲವ್ ಜಿಹಾದ್ ನಿಂದ ಈ ಹತ್ಯೆ ನಡೆದಿದೆ. ಬಾಲಕಿಯ ಮೃತದೇಹ ಸಂಶಯಾಸ್ಪದ ರೀತಿಯಲ್ಲಿ ಕಂಡು ಬಂದಿದೆ. ಆದುದರಿಂದ ಇದು ಕೊಲೆ ಪ್ರಕರಣವಾಗಿದ್ದು, ಆರೋಪಿ ಶಾಹುಲ್ ಹಮೀದ್ ಮತ್ತು ಆತನ ಕುಟುಂಬದ ವಿರುದ್ಧ ಕೊಲೆ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾರೆ.