ಕುಂದಾಪುರ, ಮೇ 05 (DaijiworldNews/DB): ಹಳ್ಳಿಗಳಿಗೆ ಕೆಎಸ್ಆರ್ಟಿಸಿ ಬಸ್ ಹೋಗುವುದಿಲ್ಲ ಎಂಬ ದೂರುಗಳು ಬರುತ್ತಿವೆ. ಶಾಲಾರಂಭವಾಗಿ ವಾರದೊಳಗೆ ಬಸ್ ವ್ಯವಸ್ಥೆ ಮಾಡದಿದ್ದರೆ ನನ್ನದೇ ಶಾಲೆಯ ಐದು ಸಾವಿರ ವಿದ್ಯಾರ್ಥಿಗಳನ್ನು ಕರೆಸಿ ಕುಂದಾಪುರ ಕೆಎಸ್ಆರ್ಟಿಸಿ ಡಿಪೋದ ಎದುರು ನಿಲ್ಲಿಸುತ್ತೇನೆ ಎಂದು ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಸಾರಿಗೆ ಇಲಾಖೆಗೆ ಎಚ್ಚರಿಕೆ ನೀಡಿದ್ದಾರೆ.
ಇಲ್ಲಿನ ತಾಲೂಕು ಪಂಚಾಯತ್ ನ ವಿಎಸ್ ಆಚಾರ್ಯ ಸಭಾಂಗಣದಲ್ಲಿ ಗುರುವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.
ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗ್ರಾಮೀಣ ಭಾಗಗಳಿಗೆ ಬಸ್ ವ್ಯವಸ್ಥೆ ಇಲ್ಲದೇ ಜನಸಾಮಾನ್ಯರು ಸಂಕಷ್ಟ ಎದುರಿಸುತ್ತಿದ್ದಾರೆ. ಸಮಸ್ಯೆಯ ಕುರಿತು ಡಿಪೋ ಮ್ಯಾನೇಜರ್ ಗೆ ಸಾಕಷ್ಟು ಬಾರಿ ಮನವರಿಕೆ ಮಾಡಿದ್ದೇನೆ. ದಪ್ಪ ಚರ್ಮದಂತೆ ವರ್ತಿಸುವ ಅವರು ಸಭೆಗೆ ಬಾರದೇ ಸಿಬ್ಬಂದಿಗಳನ್ನು ಕಳುಹಿಸಿದ್ದಾರೆ. ಇದು ಒಳ್ಳೆಯ ನಡೆಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕೋವಿಡ್ನಿಂದ ಮೃತಪಟ್ಟವರ ಕುಟುಂಬಗಳಿಗೆ ಇನ್ನೂ ಪರಿಹಾರ ಹಣ ದೊರಕಿಲ್ಲ. ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆಗಳ ಆಗರವಾಗಿದೆ. ಸಭೆಗೆ ಆರೋಗ್ಯ ಇಲಾಖೆಗೆ ಸಂಬಂಧಪಟ್ಟವರು, ವೈದ್ಯರು ಗೈರಾಗಿದ್ದಾರೆ. ಸಭೆಗೆ ಬರುವ ಕನಿಷ್ಠ ಸೌಜನ್ಯತೆಯೂ ಅವರಿಗಿಲ್ಲದಂತೆ ಕಾಣುತ್ತಿದೆ. ಸಭೆಗೆ ಬಂದ ವೈದ್ಯರನ್ನು ಬೇಗನೇ ಕಳುಹಿಸಿಕೊಡುತ್ತಿದ್ದೇವೆ. ಮುದೂರಿನಲ್ಲಿ 40 ಡೆಂಗ್ಯೂ ಪ್ರಕರಣಗಳಿವೆ. ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಅದು ವ್ಯಾಪಿಸದಂತೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ರಾಜೇಶ್ವರಿ ಅವರಿಗೆ ಶಾಸಕರು ಸೂಚಿಸಿದರು.
ಕಂದಾಯ ಇಲಾಖೆಯಲ್ಲಿ ಎಲ್ಲಾ ರೀತಿಯ ಕೆಲಸಗಳು ತ್ವರಿತಗತಿಯಲ್ಲಿ ನಡೆಯಬೇಕು. ನಿವೇಶನ ರಹಿತರನ್ನು ಅಲೆದಾಡಿಸದೆ ಕೆಲಸ ಮಾಡಿಸಿಕೊಡಬೇಕು. ಕೊರಗ ಜನಾಂಗದವರ ಮನೆಗೆ ತೆರಳಿ ಅವರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವ ಪ್ರಾಮಾಣಿಕ ಕೆಲಸ ಮಾಡಬೇಕು. ನಾಲ್ಕು ಗೋಡೆ ಒಂದು ಶೀಟ್ ಹಾಕಿ ಮನೆ ನಿರ್ಮಿಸಿಕೊಂಡರೆ ಅಂತವರನ್ನು ಅಲೆದಾಡಿಸದೇ ಕ್ಷಿಪ್ರಗತಿಯಲ್ಲಿ ವಿದ್ಯುತ್ ಸಂರ್ಕ ಕಲ್ಪಿಸಬೇಕು. ವಿದ್ಯುತ್ ಸಂಪರ್ಕಕ್ಕಾಗಿ ಜನಸಾಮಾನ್ಯರನ್ನು ಅಲೆದಾಡಿಸುತ್ತಿರುವ ದೂರುಗಳಿವೆ. ಪ್ರತೀ ಮನೆಗೂ ಬೆಳಕು ಬರಬೇಕು ಎನ್ನುವುದು ಸರ್ಕಾರದ ಆಶಯ. ಸರ್ಕಾರದ ಆಶಯಗಳಿಗನುಗುಣವಾಗಿ ಅಧಿಕಾರಿಗಳು ಕೆಲಸ ಮಾಡಬೇಕು ಎಂದವರು ನಿರ್ದೇಶನ ನೀಡಿದರು.
ಪೊಲೀಸ್ ಇಲಾಖೆ, ಅಬಕಾರಿ ಇಲಾಖೆ ಸೇರಿದಂತೆ ಅನೇಕ ಇಲಾಖೆಯ ಅಧಿಕಾರಿಗಳು ಸಭೆಗೆ ಬಂದಿಲ್ಲ. ಕೆಲವರು ಕಚೇರಿಯ ಸಿಬ್ಬಂದಿಗಳನ್ನು ಕಳುಹಿಸಿ ಕೊಟ್ಟಿದ್ದಾರೆ. ಇದು ಮುಂದುವರೆಯಬಾರದು. ಕೇವಲ ಕಾಟಾಚಾರಕ್ಕೆ ಸಭೆ ಸಡೆಸುವುದಲ್ಲ. ಪೊಲೀಸ್ ಇಲಾಖೆ, ಅಬಕಾರಿ ಇಲಾಖೆಯ ಬಗ್ಗೆ ಅನೇಕ ದೂರುಗಳಿವೆ. ಗ್ರಾಮೀಣ ಭಾಗದ ರಸ್ತೆಗಳಲ್ಲಿ ಜೀಪು ನಿಲ್ಲಿಸಿ ಪೊಲೀಸರು ಹಣ ವಸೂಲಿ ನಡೆಸುತ್ತಿದ್ದಾರೆ ಎನ್ನುವ ದೂರುಗಳಿವೆ. ಇದನ್ನು ನಾನು ಸಹಿಸುವುದಿಲ್ಲ. ಗ್ರಾಮೀಣ ಭಾಗದ ಪ್ರತೀ ಅಂಗಡಿಗಳಲ್ಲಿಯೂ ಮದ್ಯ ಮಾರಾಟ ಮಾಡುತ್ತಿದ್ದಾರೆ. ಅನಧಿಕೃತ ಮದ್ಯ ಮಾರಾಟ ತಡೆಯಲಾಗದವರು ಕಚೇರಿಯಲ್ಲಿ ಏಕೆ ಕುಳಿತುಕೊಳ್ಳಬೇಕು ಎಂದು ಪ್ರಶ್ನಿಸಿದ ಅವರು, ಅಬಕಾರಿ ಇಲಾಖೆಯ ಡಿಸಿ ಸರಿ ಇಲ್ಲ ಎಂದು ನೇರವಾಗಿ ಹೇಳುತ್ತೇನೆ. ಈ ಬಗ್ಗೆ ಸಚಿವರೊಂದಿಗೂ ಮಾತನಾಡಿದ್ದೇನೆ. ಸಂಸ್ಕಾರಯುತವಾಗಿದ್ದ ಹಳ್ಳಿ ಇದೀಗ ಸಂಸ್ಕಾರ ರಹಿತ ಹಳ್ಳಿಯಾಗಿ ಮಾರ್ಪಾಡಾಗಿದೆ. ಅಬಕಾರಿ ಇಲಾಖೆಯ ಬೇಜವಾಬ್ದಾರಿತನದಿಂದ ಇಂದು ಹಳ್ಳಿಗಾಡಿನ ಕುಟುಂಬಗಳು ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು.
ಸಭೆ ಆರಂಭದಿಂದಲೂ ಧ್ವನಿವರ್ಧಕ ವ್ಯವಸ್ಥೆ ಸರಿ ಇರದ ಪರಿಣಾಮ ಕೆಲಹೊತ್ತು ಸಭೆಯಲ್ಲಾದ ಚರ್ಚೆಗಳು ಕೇಳಸದೆ ಗೊಂದಲದ ವಾತಾವರಣ ನಿರ್ಮಾಣವಾಯಿತು. ಬಳಿಕ ಪತ್ರಕರ್ತರು ಧ್ವನಿವರ್ಧಕ ವ್ಯವಸ್ಥೆ ಸರಿ ಇಲ್ಲದರ ಕುರಿತು ಶಾಸಕರ ಗಮನಕ್ಕೆ ತಂದರು. ಈ ವೇಳೆ ಪ್ರತಿಕ್ರಿಯಿಸಿದ ಶಾಸಕರು ಮುಂದಿನ ತ್ರೈಮಾಸಿಕ ಸಭೆಯೊಳಗೆ ಸಭಾಂಗಣದ ಧ್ವನಿವರ್ಧಕ ವ್ಯವಸ್ಥೆ ಸರಿಯಾಗಬೇಕು. ಸಭೆಯಲ್ಲಾದ ಚರ್ಚೆಗಳನ್ನು ಸಾರ್ವಜನಿಕರಿಗೆ ತಲುಪಿಸುವ ಜವಾಬ್ದಾರಿ ಮಾಧ್ಯಮಮಿತ್ರರಿಗಿದ್ದು, ಅವರಿಗೆ ಸಭೆಯ ನಡಾವಳಿ ಪತ್ರ ಕೊಡಬೇಕು ಎಂದು ಇಓ ಗೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಇಓ ಶ್ವೇತಾ, ಈಗಾಗಲೇ ಎರಡು ಲಕ್ಷ ರೂ. ಧ್ವನಿವರ್ಧಕಕ್ಕಾಗಿ ಮುಂಗಡ ಹಣ ತೆಗೆದಿರಿಸಲಾಗಿದೆ. ಆದಷ್ಟು ಬೇಗ ಸರಿಪಡಿಸಲಾಗುವುದು ಎಂದರು.
ತಹಸೀಲ್ದಾರ್ ಕಿರಣ್ ಗೌರಯ್ಯ ಉಪಸ್ಥಿತರಿದ್ದರು.