ಬೆಂಗಳೂರು,ಜ 03(MSP): ಐಪಿಎಸ್ ಅಧಿಕಾರಿ ಡಿ.ರೂಪಾ ಅವರು ತಮ್ಮ ಹೆಸರನ್ನು ದುರ್ಬಳಕೆ ಮಾಡಲಾಗಿದೆ ಎಂದು ಆರೋಪಿಸಿ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಿಖೆ ವೇಳೆ ಹೆಸರು ದುರ್ಬಳಕೆ ಮಾಡಿದ ಮಹಿಳೆ ಮಂಗಳೂರಿನಾಕೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ಉತ್ತರ ಪ್ರದೇಶದ ಲಕ್ನೋ ಪೊಲೀಸರಿಗೆ ಕರೆ ಮಾಡಿದ ಮಹಿಳೆಯೊಬ್ಬರು, ತಮ್ಮನ್ನು ತಾವು ಗೃಹ ರಕ್ಷಕ ದಳದ ಐಜಿಪಿ ಡಿ.ರೂಪಾ ಎಂದು ಪರಿಚಯಿಸಿಕೊಂಡಿದ್ದಾರೆ. ಅಲ್ಲದೆ ತಾನು ಕಾರ್ಯ ನಿಮಿತ್ತ ಲಕ್ನೋಗೆ ಬರುತ್ತಿದ್ದೇನೆ. ಡಿಸೆಂಬರ್ 29 ರಿಂದ ಜನವರಿ 3ರವರೆಗೆ ಉತ್ತಮವಾದ ಹೋಟೆಲ್ನಲ್ಲಿ ರೂಂ ಬುಕ್ ಮಾಡಿ ಎಂದು ಹೇಳಿದ್ದಾರೆ. ಆಕೆಯ ಮಾತನ್ನು ನಂಬಿದ್ದ ಅಧಿಕಾರಿ, ಐಜಿಪಿ ಡಿ.ರೂಪಾ ಹೆಸರಿನಲ್ಲಿ ಹೊಟೇಲ್ ರೂಂ ಕಾಯ್ದಿರಿಸಿದ್ದಾರೆ.
ಆದರೆ ಬಳಿಕ ಈ ಬಗ್ಗೆ ರೂಪಾ ಅವರ ಪರಿಚಯದ ಅಧಿಕಾರಿ ವಿಕಾಸ್ ಚಂದ್ರ ತ್ರಿಪಾಠಿ ಪೋನ್ ಕರೆ ಮಾಡಿ ಈ ಬಗ್ಗೆ ವಿಚಾರಿಸಿದಾಗ ಈ ಕೃತ್ಯ ಬಯಲಿಗೆ ಬಂದಿದೆ. ತಕ್ಷಣ ಎಚ್ಚೆತ್ತುಕೊಂಡ ರೂಪ ಅವರು ಕರೆ ಬಂದಿದ್ದ ನಂಬರ್ ಕೇಳಿ ಪಡೆದುಕೊಂಡಿದ್ದರೆ. ನಂತರ ವಿಚಾರಿಸಲೆಂದು ರೂಪಾ ಅವರು ಆ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ ಮಹಿಳೆ ಸರಿಯಾಗಿ ಮಾತನಾಡದ ಕಾರಣ ಈಗ ರೂಪಾ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ರೂಪಾ ಅವರ ಹೆಸರು ಬಳಸಿಕೊಂಡು ವಂಚಿಸುತ್ತಿರುವುದು ಇದು ಎರಡನೇ ಪ್ರಕರಣವಾಗಿದೆ. ಈ ಹಿಂದೆ ಇನ್ಸ್ಟಾಗ್ರಾಮ್ ನಲ್ಲಿ ರೂಪಾ ಅವರ ನಕಲಿ ಖಾತೆ ತೆರೆದು ಬಡ ಹೆಣ್ಣುಮಕ್ಕಳಿಗಾಗಿ ಚಂದಾ ವಸೂಲಿ ಮಾಡುವ ಬಗ್ಗೆಯೂ ಅವರು ಸೈಬರ್ ಕ್ರೈಂಗೆ ದೂರು ಸಲ್ಲಿಸಿದ್ದರು.
ರೂಪಾ ಅವರು ನೀಡಿದ ದೂರಿನಂತೆ ಮೊಬೈಲ್ ನಂಬರ್ ನ ಬೆನ್ನತ್ತಿದ್ದ ಪೊಲೀಸರಿಗೆ ಮಂಗಳೂರಿನ ಮಹಿಳೆ ಕರೆ ಮಾಡಿರುವುದು ತಿಳಿದುಬಂದಿದೆ. ನಗರದ ಬಲ್ಮಠದಲ್ಲಿರುವ ಚಿರಾಗ್ ಅಪಾರ್ಟ್ಮೆಂಟ್ ನಲ್ಲಿ ವಾಸವಿರುವ ಮಹಿಳೆಯೊಬ್ಬರು ಬಳಸುವ ಪೋನ್ ನಂಬರ್ ಇದಾಗಿದ್ದು ಆಕೆಯನ್ನು ವಿಚಾರಿಸಿದಾಗ ತಮ್ಮ ಮೊಬೈಲ್ ಕಳೆದು ಹೋಗಿದ್ದು ಪಾಂಡೇಶ್ವರ ಠಾಣೆಗೆ ಈ ಬಗ್ಗೆ ದೂರು ಸಲ್ಲಿಸಿ ಎಫ್ಐಆರ್ ಹಾಗೂ ದೂರು ಸ್ವೀಕೃತಿ ಅರ್ಜಿಯನ್ನು ಬಿಎಸ್ಎನ್ಎಲ್ ಕಚೇರಿಗೆ ಸಲ್ಲಿಸಿ, ಅದೇ ಸಂಖ್ಯೆಯ ಹೊಸ ಸಿಮ್ ಖರೀದಿಸಿದ್ದೇನೆ ಎಂದು ಮಹಿಳೆ ಮಾಹಿತಿ ನೀಡಿದ್ದಾರೆ. ಒಟ್ಟಾರೆ ಮಹಿಳೆ ಹೇಳಿಕೆಯಿಂದ ಪೊಲೀಸರು ಗೊಂದಲಕ್ಕೆ ಒಳಗಾಗಿದ್ದು ಸತ್ಯಾಸತ್ಯತೆಗಾಗಿ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.