ಬಂಟ್ವಾಳ, ಮೇ 05(DaijiworldNews/MS): ಕನ್ಯಾನದ ಗ್ರಾಮದ ಕಣಿಯೂರು ಹತ್ತನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ತಿರುವು ದೊರಕಿದ್ದು , ಅನ್ಯಕೋಮಿನ ಯುವಕ ಪ್ರೀತಿಸುವಂತೆ ಒತ್ತಾಯಿಸಿದ್ದರಿಂದ ಮನನೊಂದು ಬಾಲಕಿ ಕೃತ್ಯ ಎಸಗಿದ್ದು, ಹೀಗಾಗಿ ಯುವಕನ ಯುವಕನೋರ್ವನ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಲತಃ ಸುಳ್ಯ ತಾಲೂಕಿನ ಪಂಜ ನಿವಾಸಿ ಸಂಜೀವ ಎಂಬವರ ಪುತ್ರಿ ಆತ್ಮೀಕಾ (14) ಎಂಬಾಕೆ ಕಣಿಯೂರು ಎಂಬಲ್ಲಿರುವ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು . ಕನ್ಯಾನ ಗ್ರಾಮದ ಹಮೀದ್(30) ಆತ್ಮಹತ್ಯೆಗೆ ಕಾರಣ ಎಂದು ಅವನ ಮೇಲೆ ಸಂಜೀವ ಅವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕನ್ಯಾನ ಗ್ರಾಮದ ಕಣಿಯೂರಿನಲ್ಲಿ ಮಸೀದಿ ಹಿಂಬಾಗದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಸಂಜೀವ ಅವರ ಕುಟುಂಬ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು. ಎಂದಿನಂತೆ ದಂಪತಿಗಳು ಕೂಲಿ ಕೆಲಸಕ್ಕೆ ತೆರಳಿದ್ದು, ಪುತ್ರ ಔಷಧಿ ತರಲೆಂದು ತೆರಳಿದ್ದು ಪುತ್ರಿ ಮಾತ್ರ ಮನೆಯಲ್ಲಿದ್ದಳು. ತಾಯಿ ಬೇಗ ಕೆಲಸ ಮುಗಿಸಿ 11.15 ರ ವೇಳೆಗೆ ಮನೆಗೆ ಮರಳಿದಾಗ ಮಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಆತ್ಮೀಕಾ ಕಣಿಯೂರು ತಲೆಕ್ಕಿ ನಿವಾಸಿಯಾದ ಸಾಹುಲ್ ಹಮೀದ್ ಯಾನೆ ಕುಟ್ಟ ದೀರ್ಘ ಕಾಲ ಮೊಬೈಲ್ ನಲ್ಲಿ ಮಾತನಾಡುತ್ತಿದ್ದು ಇದನ್ನು ತಿಳಿದು ತಂದೆ ಮಗಳ ಮೊಬೈಲ್ ನ್ನು ತೆಗೆದಿರಿಸಿ ಆಕೆಗೆ ಬುದ್ಧಿವಾದ ಹೇಳಿದ್ದರು. ಸಾಹುಲ್ ಹಮೀದ್ ಹಾಗೂ ಆತನ ಅಣ್ಣನನ್ನು ಈ ವಿಚಾರಕ್ಕೆ ಸಂಬಂಧಪಟ್ಟಂತೆ ಕರೆದು ಆತನಿಗೆ ಮಗಳ ಸಹವಾಸಕ್ಕೆ ಬರಬೇಡ ಎಂದು ಎಚ್ಚರಿಕೆ ನೀಡಿದ್ದರು. ಆದರೂ ಕೂಡ ಸಾಹುಲ್ ಹಮೀದ್ ಪದೇ ಪದೇ ಯಾರೂ ಇಲ್ಲದ ಸಮಯ ಆಕೆಯ ಮನೆಗೆ ಬಂದು ಆಕೆಯನ್ನು ಭೇಟಿಯಾಗಿ ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ. ಅಲ್ಲದೇ ನೀನು ನಿನ್ನ ತಂದೆ - ತಾಯಿಯನ್ನು ಬಿಟ್ಟು ನನ್ನೊಂದಿಗೆ ಬಾ. ನೀನು ಬರುವುದಿಲ್ಲವಾದರೆ ಸಾಯಿ ಎಂದು ಸಾಹುಲ್ ಹಮೀದ ಯಾನೆ ಕುಟ್ಟ ಹೇಳಿರುವುದನ್ನು ಮಗಳು ಆತ್ಮಿಕ ತಂದೆ ಹಾಗೂ ತಾಯಿ ಬಳಿ ಹೇಳಿಕೊಂಡಿದ್ದಳು ಎಂದು ದೂರಿನಲ್ಲಿ ತಿಳಿಸಲಾಗಿದೆ.