ಕಾಸರಗೋಡು, ಮೇ 04 (DaijiworldNews/HR): ಚೆರ್ವತ್ತೂರಿನ ಕೂಲ್ ಬಾರ್ ನಲ್ಲಿ ಶವರ್ಮ ಸೇವಿಸಿ ವಿದ್ಯಾರ್ಥಿನಿ ಮೃತಪಟ್ಟ ಘಟನೆ ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟ್ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದೆ.
ಮಾಧ್ಯಮ ವರದಿಗಳ ಆಧಾರದ ಮೇಲೆ ಹೈಕೋರ್ಟ್ ಪ್ರಕರಣ ದಾಖಲಿಸಿದ್ದು , ಈ ಬಗ್ಗೆ ನಿಲುವು ಸ್ಪಷ್ಟ ಪಡಿಸುವಂತೆ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ.
ಏಪ್ರಿಲ್ 29 ಮತ್ತು 30ರಂದು ಚೆರ್ವತ್ತೂರು ಐಡಿಯಲ್ ಫುಡ್ ಪಾಯಿಂಟ್ ಕೂಲ್ ಬಾರ್ ನಲ್ಲಿ ಶವರ್ಮ ಸೇವಿಸಿದ್ದ ಕರಿವೆಳ್ಳೂರು ಪೇರಳದ ದೇವಾನಂದ ಎಂಬ 16 ವರ್ಷದ ವಿದ್ಯಾರ್ಥಿನಿ ಮೃತಪಟ್ಟು, 50ಕ್ಕೂ ಅಧಿಕ ಮಂದಿ ಅಸ್ವಸ್ಥಗೊಂಡಿದ್ದರು.
ಈ ನಡುವೆ ವಿದ್ಯಾರ್ಥಿನಿಯ ಸಾವಿಗೆ ಶಿಗಲ್ಲಾ ಬ್ಯಾಕ್ಟೀರಿಯಾ ಕಾರಣ ಎಂದು ಈಗಾಗಲೇ ಕೋಜಿಕ್ಕೋಡ್ ನ ಪ್ರಯೋಗಾಲಯದಲ್ಲಿ ನಡೆಸಿದ ತಪಾಸಣೆಯಿಂದ ತಿಳಿದುಬಂದಿದೆ. ಇದಲ್ಲದೆ ಇತರ ಮೂವರಲ್ಲೂ ಶಿಗಲ್ಲಾ ಬ್ಯಾಕ್ಟೀರಿಯಾ ಅಂಶ ಇರುವುದು ತಪಾಸಣೆಯಿಂದ ಪತ್ತೆಯಾಗಿರುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ.
ಇನ್ನು ಶವರ್ಮ ಸೇವಿಸಿ ವಿದ್ಯಾರ್ಥಿನಿ ದೇವಾನಂದ ಮೃತಪಟ್ಟ ಘಟನೆಗೆ ಸಂಬಂಧಪಟ್ಟಂತೆ ಚೆರ್ವತ್ತೂರಿನ ಕೂಲ್ ಬಾರ್ ಮೆನೇಜರ್ ಪಡನ್ನದ ಟಿ. ಅಹಮ್ಮದ್ನನ್ನು ಪೊಲೀಸರು ಬಂಧಿಸಿದ್ದು, ಇದರಿಂದ ಬಂಧಿತರ ಸಂಖ್ಯೆ ಮೂರಕ್ಕೇರಿದೆ. ವಿದೇಶದಲ್ಲಿರುವ ಕೂಲ್ ಬಾರ್ ನ ಮಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.