ಬೆಂಗಳೂರು,ಜ 03(MSP):ಕೇರಳ ರಾಜ್ಯ ಸರ್ಕಾರವು ಶಬರಿಮಲೆ ವಿವಾದವನ್ನು ಪರಿಹರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು, ಹಿಂದುಗಳ ಮೇಲೆ ಅಲ್ಲಿನ ಸರ್ಕಾರ ಹಾಡಹಗಲೇ ಅತ್ಯಾಚಾರ ನಡೆಸುತ್ತಿದೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಮ್ಯೂನಿಸ್ಟ್ ಸರ್ಕಾರ ಪೂರ್ವಾಗ್ರಹಪೀಡಿತರಾಗಿಯೇ ಯೋಚಸಿ ಅವರ ವಿಚಾರಧಾರೆಗಳನ್ನು ಜನರ ಮೇಲೆ ಒತ್ತಾಯಪೂರ್ವಕವಾಗಿ ಹೇರಲು ಮುಂದಾಗಿದ್ದಾರೆ. ಸರ್ವೋಚ್ಚ ನ್ಯಾಯಾಲಯ ಶಬರಿಮಲೆಗೆ ಎಲ್ಲಾ ವಯಸ್ಸಿನ ಮಹಿಳೆಯರು ಪ್ರವೇಶಿಸಬಹುದು ಎನ್ನುವುದು ನಿರ್ದೇಶನ ನೀಡಿದೆ ಎನ್ನುವುದುನ್ನು ನಾನು ಗೌರವಿಸಿ ಒಪ್ಪುತ್ತೇನೆ. ಆದರೆ ಕಾನೂನು ಮತ್ತು ಸುವ್ಯವಸ್ಥೆ ರಾಜ್ಯಕ್ಕೆ ಸಂಬಂಧಿಸದ ವಿಚಾರವಾಗಿದ್ದು, ಇದನ್ನು ರಾಜ್ಯದ ಜನತೆಯೊಂದಿಗೆ ಯಾವ ರೀತಿಯಾಗಿ ವ್ಯವಹರಿಸಬೇಕು ಎನ್ನುವುದನ್ನು ತಿಳಿದಿರಬೇಕು. ಎಲ್ಲಾ ಧರ್ಮಗಳನ್ನು ಗೌರವಿಸುವ ಮನೋಭಾವ ಸರ್ಕಾರಕ್ಕಿರಬೇಕು. ಜನರ ನಂಬಿಕೆಯನ್ನು ನೋಯಿಸದಂತೆ ಸರ್ಕಾರವು ನಡೆದುಕೊಳ್ಳಬೇಕು. ಆದರೆ ಕೇರಳ ಸರ್ಕಾರವು ರಾಜತಾಂತ್ರಿಕವಾಗಿ ಅದನ್ನು ನಿರ್ವಹಿಸಲು ಸಂಪೂರ್ಣವಾಗಿ ವಿಫಲವಾಗಿದೆ. ಆ ಮೂಲಕ ಪಿಣರಾಯಿ ಸರ್ಕಾರ ಹಿಂದೂಗಳ ಮೇಲೆ ಹಾಡಹಗಲು ಅತ್ಯಾಚಾರ ನಡೆಸಿದೆ ಎಂದು ಕಿಡಿಕಾರಿದ್ದಾರೆ.