ಮಂಗಳೂರು, ಮೇ 04 (DaijiworldNews/MS): ನಗರದ ಬೊಂದೇಲ್ನಲ್ಲಿರುವ ಬಾಲಕರ ಬಾಲ ಮಂದಿರದಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಸೇರಿದ 6 ರಿಂದ 17 ವರ್ಷದೊಳಗಿನ 13 ಅನಾಥ ಮಕ್ಕಳಿದ್ದಾರೆ, ಅವರನ್ನು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಪಿಲಿಕುಳ ನಿಸರ್ಗಧಾಮಕ್ಕೆ ಪ್ರವಾಸಕ್ಕೆಂದು ಕರೆದೊಯ್ದಿದ್ದರು.
ಆ ಮಕ್ಕಳಿಗೆ ಪೋಷಕರಿಲ್ಲದ ನೋವು ಕಾಡಬಾರದೆಂಬ ಉದ್ದೇಶದಿಂದ ಮೇ.3ರ ಮಂಗಳವಾರ ಪಿಲಿಕುಳ ನಿಸರ್ಗದಾಮಕ್ಕೆ ಪ್ರವಾಸಕ್ಕೆ ಕರೆದೊಯ್ಯಲಾಗಿತ್ತು, ಸ್ವತಃ ಜಿಲ್ಲಾಧಿಕಾರಿಯವರೇ ಈ ಮಕ್ಕಳ ಪ್ರವಾಸಕ್ಕೆ ಬೇಕಾದ ಊಟ-ಉಪಾಹಾರ ಹಾಗೂ ವಾಹನದ ವ್ಯವಸ್ಥೆ ಕಲ್ಪಿಸಿದ್ದರು, ಜತೆಗೆ ಸಂಜೆಯ ವೇಳೆಗೆ ಅವರು ಪಿಲಿಕುಳಕ್ಕೆ ಆಗಮಿಸಿ ಮಕ್ಕಳೊಂದಿಗೆ ಕಾಲಕಳೆದು ಅವರೊಂದಿಗೆ ಸಂವಾದ ನಡೆಸಿದರು. ಪಿಲಿಕುಳ ನಿಸರ್ಗಧಾಮದ ಆಯುಕ್ತ ವೆಂಕಟೇಶ್, ನಿರ್ದೇಶಕರು, ಕಾರ್ಯನಿರ್ವಾಹಣಾಧಿಕಾರಿ ಹಾಗೂ ಸಿಬ್ಬಂದಿಗಳು ಅಚ್ಚುಕಟ್ಟಾಗಿ ಮಕ್ಕಳಿಗೆ ವ್ಯವಸ್ಥೆ ಕಲ್ಪಿಸಿದ್ದರು.
ಮಹಿಳಾ ಮತ್ತು ಮಕ್ಕಳ ಸಂರಕ್ಷಣಾಧಿಕಾರಿ ಯಮುನಾ, ಮಕ್ಕಳ ರಕ್ಷಣಾ ವಿಭಾಗದ ಸಿಬ್ಬಂದಿಗಳಾದ ಸಂಧ್ಯಾ, ಸೌಭಾಗ್ಯ, ಪ್ರತಿಮಾ, ದೀಕ್ಷಾ, ಅಧೀಕ್ಷಕ ಶ್ರೀಧರ್, ರಕ್ಷಕ ತಾರನಾಥ್, ಸ್ವಚ್ಚತಾ ಸಿಬ್ಬಂದಿ ಲವೀನಾ ಹಾಗೂ ಬಾಲ ಮಂದಿರದ ಇತರೆ ಸಿಬ್ಬಂದಿಗಳು ಈ ಸಂದರ್ಭದಲ್ಲಿದ್ದರು.