ಕಡಬ, ಮೇ 04 (DaijiworldNews/HR): ರೆಂಜಿಲಾಡಿ ಗ್ರಾಮದ ಪೇರಡ್ಕ ಸಮೀಪದ ಎನ್ಕಜೆಯಲ್ಲಿನ ಇಮ್ಯಾನ್ಯುವೆಲ್ ಎ.ಜಿ. ಚರ್ಚ್ನ ಗೋಪುರದ ಶಿಲುಬೆಯನ್ನು ಕಿತ್ತು ಕೇಸರಿ ಧ್ವಜ ಹಾಕಿದ್ದಾರೆ ಎನ್ನುವ ಸುದ್ದಿ ಹಬ್ಬಿರುವ ಹಿನ್ನೆಲೆಯಲ್ಲಿ ಹಿಂದೂಪರ ಸಂಘಟನೆಗಳ ಪ್ರಮುಖರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚರ್ಚ್ನಲ್ಲಿ ದುರಸ್ತಿ ಕಾಮಗಾರಿ ನಡೆಯುತ್ತಿದ್ದು, ಕಿಡಿಗೇಡಿಗಳು ಎರಡು ದಿನಗಳ ಹಿಂದೆ ಗೋಪುರದ ಶಿಲುಬೆಯನ್ನು ಕಿತ್ತು ಅಲ್ಲಿ ಕೇಸರಿ ಧ್ವಜ ಅಳವಡಿಸಿ ಚರ್ಚ್ನ ಬಾಗಿಲು ಒಡೆದು ಒಳಪ್ರವೇಶಿಸಿ ಹನುಮಂತನ ಫೋಟೋ ಇರಿಸಿ ದೀಪ ಹಚ್ಚಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗಿ ಗೊಂದಲಕ್ಕೆ ಕಾರಣವಾಗಿತ್ತು.
ಇನ್ನು ಈ ಕೃತ್ಯಹಿಂದೂ ಪರ ಸಂಘಟನೆಗಳ ಎನ್ನುವ ದೂರುಗಳು ವ್ಯಕ್ತವಾಗಿದ್ದು, ಪೊಲೀಸ್ ಠಾಣೆಯಲ್ಲಿ ಆ ಬಗ್ಗೆ ಯಾವುದೇ ದೂರು ದಾಖಲಾಗಿರಲಿಲ್ಲ.
ಈ ಆರೋಪದ ಹಿನ್ನೆಲೆ ಬಜರಂಗದಳ ಮುಖಂಡ ಮುರಳಿಕೃಷ್ಣ ಹಸಂತಡ್ಕ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಚರ್ಚ್ ಕಟ್ಟಡ ಸ್ಥಳೀಯ ಎನ್ಕಜೆ ವಿಶ್ವನಾಥ ಗೌಡ ಅವರಿಗೆ ಸೇರಿದ್ದು, ಅದನ್ನು ಈ ಹಿಂದೆ ಬಾಡಿಗೆ ಆಧಾರದಲ್ಲಿ ಕ್ರಿಶ್ಚಿಯನ್ ವ್ಯಕ್ತಿಯೊಬ್ಬರಿಗೆ ನೀಡಲಾಗಿತ್ತು. ಆದರೆ ಅವರು ಅಲ್ಲಿ ಹಲವು ವರ್ಷಗಳ ಹಿಂದೆ ಕ್ರಿಶ್ಚಿಯನ್ ದಫನ ಭೂಮಿ ನಿರ್ಮಿಸಲು ಮುಂದಾದಾಗ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅದು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಹೊರಗಿನಿಂದ ಬಂದಿರುವ ಕ್ರಿಶ್ಚಿಯನ್ ಸಮುದಾಯದ ಕೆಲವರು ಅದೇ ಸ್ಥಳದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಿಸಲು ಮುಂದಾಗುತ್ತಿದ್ದಾರೆ. ಸ್ಮಶಾನ ಭೂಮಿಗಾಗಿ ಮಣ್ಣು ಅಗೆದು ಗುಂಡಿಯನ್ನೂ ತೋಡಿದ್ದಾರೆ. ಜನರ ಅನುಕಂಪ ಗಳಿಸುವ ಉದ್ದೇಶದಿಂದ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಎಂದು ದೂರಿದ್ದಾರೆ.
ಇನ್ನು ತಕ್ಷಣ ಅಲ್ಲಿನ ಅಕ್ರಮ ರಚನೆಗಳನ್ನು ತೆರವು ಮಾಡಿ ವಿಶ್ವನಾಥ ಗೌಡರಿಗೆ ಸೇರಿದ ಜಮೀನನ್ನು ಅವರಿಗೆ ಕೊಡಿಸುವ ಕೆಲಸವನ್ನು ಸಂಬಂಧಪಟ್ಟ ಇಲಾಖೆಯವರು ಮಾಡಬೇಕು. ಇಲ್ಲದೇ ಹೋದರೆ ಉಗ್ರ ರೀತಿಯ ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಸಿದ್ದಾರೆ.