ಕೊಚ್ಚಿ, ಜ 03(MSP):ಶಬರಿ ಮಲೆಯ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ವಿರೋಧವಿದ್ದ ಹೊರತಾಗಿಯೂ ನಲವತ್ತು ಆಸುಪಾಸು ವಯಸ್ಸಿನ ಇಬ್ಬರು ಮಹಿಳೆಯರು ಬುಧವಾರ ಬೆಳಗಿನ ಜಾವ ದೇಗುಲ ಪ್ರವೇಶ ಮಾಡಿ ದರ್ಶನ ಪಡೆದ ನಂತರ ಕೇರಳದಲ್ಲಿ ಭುಗಿಲೆದ್ದ ಹಿಂಸಾರದಲ್ಲಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ.
ಮೃತಪಟ್ಟ ವ್ಯಕ್ತಿಯನ್ನು ಚಂದ್ರನ್ ಉಣ್ಣಿತಾನ್ ಎಂದು ಗುರುತಿಸಲಾಗಿದೆ. ಇವರು ಶಬರಿಮಲೆ ಕರ್ಮಸಮಿತಿ ಕಾರ್ಯಕರ್ತರಾಗಿದ್ದರು. ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶ ವಿರೋಧಿಸಿ ಶಬರಿಮಲೆ ಕರ್ಮಸಮಿತಿ ಬುಧವಾರ ಸಂಜೆ ಪಂದಳಂನಲ್ಲಿ ಪ್ರತಿಭಟನೆಯನ್ನು ಆಯೋಜಿಸಿತ್ತು. ಆ ಸಂದರ್ಭ ಸ್ಥಳೀಯ ಸಿಪಿಎಂ ಕಚೇರಿ ಬಳಿಯಿಂದ ಪ್ರತಿಭಟನಾಕಾರರ ಮೇಲೆ ಕಲ್ಲುತೂರಾಟ ನಡೆದಿದೆ ಎನ್ನಲಾಗಿದ್ದು, ಇದರ ಪರಿಣಾಮ ಉಣ್ಣಿತಾನ್ ಗಾಯಗೊಂಡಿದ್ದರು.
ಬುಧವಾರದಂದು ಮುಖ್ಯಮಂತ್ರಿ ಪಿಣರಾಯಿ ಅವರ ಅಧಿಕೃತವಾಗಿ ಪ್ರಕಟಿಸಿದ ನಂತರ ಕೇರಳದಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಯಿತು. ತಿರುವನಂತಪುರದಲ್ಲಿರುವ ಕೇರಳ ಸಚಿವಾಲಯದ ಮುಂದೆ ತೀವ್ರ ಪ್ರತಿಭಟನೆ ನಡೆದಿತ್ತು.ಪ್ರತಿಭಟನಕಾರರನ್ನು ತಡೆಯಲು ಪೊಲೀಸರು ಜಲಫಿರಂಗಿ, ಅಶ್ರುವಾಯು ಬಳಕೆ ಮಾಡಿದರೂ ಪ್ರತಿಭಟನಕಾರರು ಜಗ್ಗಲಿಲ್ಲ. ಕೊನೆಗೆ ಭಾರೀ ಪ್ರಮಾಣದಲ್ಲಿ ಶಬ್ದ ಹೊರಸೂಸಿ ಗುಂಪನ್ನು ಚದುರಿಸುವ ಸ್ಟನ್ ಗ್ರೆನೇಡ್ ಅನ್ನು ಬಳಕೆ ಮಾಡಲಾಗಿದೆ. ಈ ಘಟನೆಯ ಬಳಿಕ ಕೇರಳದಾಂತ್ಯಂತ ಬಿಗುವಿನ ಪರಿಸ್ಥಿತಿ ಇದೆ.