ಉಪ್ಪಿನಂಗಡಿ, ಮೇ 04 (DaijiworldNews/MS): ಹೊಟೇಲ್ ನಲ್ಲಿ ಊಟ ಮಾಡುತ್ತಿದ್ದ ಮಹಿಳಾ ಗ್ರಾಹಕಿಯ ಮೈ ಮೇಲೆ ಕೈ ಹಾಕಿ ಚುಡಾಯಿಸಿದ್ದು ಮಾತ್ರವಲ್ಲದೇ, ಪ್ರಶ್ನಿಸಿದ ಹೊಟೇಲ್ ಮಾಲಕ ಮತ್ತು ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿ ದಾಂಧಲೆ ನಡೆಸಿದ ಘಟನೆಯೊಂದು ಉಪ್ಪಿನಂಗಡಿಯಲ್ಲಿ ಸೋಮವಾರ ನಡೆದಿದೆ.
ಇಲ್ಲಿನ ಬಸ್ ನಿಲ್ದಾಣದ ಪರಿಸರದಲ್ಲಿನ ಹೊಟೇಲ್ನಲ್ಲಿ ವೇಣೂರು ಪರಿಸರದ ನಿವಾಸಿ ಪ್ರಶಾಂತ್ ದಾಂಧಲೆಗೈದ ಆರೋಪಿ. ಮಧ್ಯಾಹ್ನದ ಸಮಯದಲ್ಲಿ ಹೊಟೇಲಿಗೆಂದು ಬಂದ ಆರೋಪಿ ಊಟಕ್ಕೆ ಆರ್ಡರ್ ಕೊಟ್ಟಿದ್ದಾನೆ. ಆದರೆ ನಂತರ ಆತ ತನ್ನ ಸಮೀಪದ ಕುರ್ಚಿಯಲ್ಲಿ ಕುಳಿತಿದ್ದ ಮಹಿಳಾ ಗ್ರಾಹಕಿಯೋರ್ವರ ಮೈ ಮೇಲೆ ಕೈ ಹಾಕಿ ಚುಡಾಯಿಸಿದ್ದಾನೆ.
ಗ್ರಾಹಕಿ ಈ ಬಗ್ಗೆ ಹೊಟೇಲ್ ಮಾಲಕರಲ್ಲಿ ದೂರು ನೀಡಿದ್ದು, ಮಧ್ಯ ಪ್ರವೇಶಿಸಿದ ಹೊಟೇಲ್ ಮಾಲಕರು ಆತನನ್ನು ಹೊಟೇಲ್ ನಿಂದ ಹೊರಕ್ಕೆ ಕಳುಹಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಆತ ಹೊಟೇಲಿಗೆ ನುಗ್ಗಿ ಸೋಡಾ ಬಾಟ್ಲಿಯನ್ನು ಎಸೆಯುತ್ತಾ ದಾಂಧಲೆ ನಡೆಸಿದನಲ್ಲದೆ , ರಕ್ಷಣೆ ಬಂದ ಪೊಲೀಸರ ಮೇಲೂ ಆಕ್ರಮಣಕಾರಿಯಾಗಿ ವರ್ತಿಸಿದ್ದಾನೆ.
ಈ ಸಮಯದಲ್ಲಿ ಹೊಟೇಲ್ ಕುರ್ಚಿಯೊಂದನ್ನು ಎತ್ತಿ ಎಸೆಯಲು ಯತ್ನಿಸಿದ ವೇಳೆ ನೆಲಕ್ಕೆ ಬಿದ್ದ ಆತನ ಮುಖಕ್ಕೆ ಗಾಯವಾಗಿದ್ದು , ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಹೊಟೇಲ್ ಮಾಲಕರು ಪೊಲೀಸರಿಗೆ ದೂರು ನೀಡಿದ್ದು, ಸಿಸಿ ಕಾಮೆರಾದಲ್ಲಿ ದೃಶ್ಯಾವಳಿಯ ದಾಖಲೆ ಪರಿಶೀಲಿಸಿ ಆರೋಪಿಯ ವಿರುದ್ದ ಕ್ರಮಕ್ಕೆ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.