ಮಂಗಳೂರು, ಮೇ 04 (DaijiworldNews/MS): ನಗರದ ತುಳು ಭವನದ ಹತ್ತಿರದಲ್ಲಿಯೇ ಬಸವೇಶ್ವರರ ಸಭಾಭವನ ನಿರ್ಮಾಣಕ್ಕೆ ಸರ್ಕಾರ ಆಡಳಿತಾತ್ಮಕ ಮಂಜೂರಾತಿ ನೀಡಿದ್ದು, ಶೀಘ್ರದಲ್ಲೇ ಭವನ ನಿರ್ಮಾಣಕ್ಕೆ ಕ್ರಮವಹಿಸಿ ಆ ಭವನದಲ್ಲಿ ಬಸವಣ್ಣನವರ ತತ್ವ- ಸಿದ್ಧಾಂತಗಳನ್ನು ಪ್ರಸಾರ ಮಾಡುವ ಕೆಲಸಗಳನ್ನು ಮಾಡಲಾಗುತ್ತದೆ ಎಂದು ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ ಅವರು ಹೇಳಿದರು.
ಅವರು ಮೇ. 3ರ ಮಂಗಳವಾರ ನಗರದ ತುಳುಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಂಗಳೂರಿನ ಕರಾವಳಿ ವೀರಶೈವ ಕ್ಷೇಮಾಭಿವೃದ್ಧಿ ಸಂಘದ ಜಂಟಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಸವೇಶ್ವರರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
12ನೇ ಶತಮಾನದಲ್ಲಿ ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದ ಬಸವೇಶ್ವರರು ಜಾತಿ, ಲಿಂಗ, ಮತ ಭೇದವನ್ನು ನಿರ್ಮೂಲನೆ ಮಾಡಲು ಹಾಗೂ ಸಮಾನತೆ ತರಲು ಶ್ರಮಿಸಿದರು, ಈ ಕುರಿತು ಜನಸಮೂಹವನ್ನು ಜಾಗೃತಗೊಳಿಸಲು ಸರಳ ಭಾಷೆಯಲ್ಲಿ ನೂರಾರು ವಚನಗಳನ್ನು ರಚಿಸಿದರು, ಅವರ ಆದರ್ಶಗಳನ್ನು ಅರಿಯಲು ಈ ಜಯಂತಿಯನ್ನು ಸರ್ಕಾರದ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದರು.
ಸಮಾಜ ಪರಿವರ್ತನೆಗೆ ಅವರು ಹಾಕಿ ಕೊಟ್ಟ ಮಾರ್ಗದ ನೆನಪು ಮಾಡಿಕೊಳ್ಳಲು ಹಾಗೂ ಅವರ ತತ್ವ ಸಿದ್ಧಾಂತವನ್ನು ಪ್ರಸಾರ ಮಾಡಲು ನಗರದಲ್ಲಿ ಬಸವೇಶ್ವರ ಸಭಾಭವನದ ನಿರ್ಮಿಸಲು ಜನಪ್ರತಿನಿಧಿಗಳು ಯತ್ನಿಸುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಪರ ಜಿಲ್ಲಾಧಿಕಾರಿ ಡಾ. ಕೃಷ್ಣಮೂರ್ತಿ ಅವರು ಮಾತನಾಡಿ, ಶ್ರೇಷ್ಠ ತತ್ವಜ್ಞಾನಿಗಳು ಹಾಗೂ ದಾರ್ಶನಿಕರ ದೇಶ ಭಾರತ. ಸಮಾಜ ಅದಃಪತನಕ್ಕೆ ಹೋದಾಗ ಈ ತತ್ವಜ್ಞಾನಿಗಳು ಹಾಗೂ ದಾರ್ಶನಿಕರು ಸುಧಾರಣೆಗೆ ಯತ್ನಿಸಿದ್ದಾರೆ, ಅಂತಹವರಲ್ಲಿ ಬುದ್ಧ, ಮಹಾವೀರರು ಸಮಾಜದ ಪರಿವರ್ತನೆಗೆ ಕಾರಣೀಭೂತರಾಗಿದ್ದಾರೆ, 12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರು ಸಮಾಜದಲ್ಲಿ ಜಾತಿ ಪದ್ದತಿಯ ನಿರ್ಮೂಲನೆಯಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಯತ್ನಿಸಿದರು, ಮನುಷ್ಯನಲ್ಲಿ ಗಂಡು-ಹೆಣ್ಣು ಎಂಬ ಎರಡೇ ಜಾತಿ, ಅದರ ಹೊರತು ಬೇರೆ ಜಾತಿಗಳಿಲ್ಲ, ಎಲ್ಲರೂ ಸಮಾನರು, ತಾವು ಮಾಡುವ ಕಾಯಕದಲ್ಲಿಯೇ ದೇವರನ್ನು ಕಾಣಬೇಕು ಎನ್ನುವ ತತ್ವವನ್ನು ತಾವು ಅಳವಡಿಸಿಕೊಂಡು ತೋರಿಸಿ, ವೈಚಾರಿಕ ಚಿಂತನೆಗಳನ್ನು ಸಮಾಜದ ಮುಂದಿರಿಸಿದರು ಬಸವೇಶ್ವರರು ತಮ್ಮ ಬದುಕಿನಲ್ಲಿ ಅವುಗಳನ್ನು ಅಳವಡಿಸಿಕೊಂಡರು, ಸಮಾಜದಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಬದಲಾವಣೆಗೆ ಯತ್ನಿಸಿದ ಅವರ ತತ್ವ-ಆದರ್ಶಗಳನ್ನು ಇಂದಿಗೂ ಪ್ರಸ್ತುತ ಎಂದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಮಂಗಳೂರಿನ ಸುರತ್ಕಲ್ ಎನ್ಐ ಟಿ ಕೆಯ ಉದಯಕುಮಾರ್ ಆರ್. ಯರಗಟ್ಟಿ, ದಿವ್ಯ ಸಾನಿಧ್ಯ ವಹಿಸಿದ್ದ ಮಂಗಳೂರು ಬಸವನಗುಡಿ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗೂ ಮಂಗಳೂರು ಕರಾವಳಿ ವೀರಶೈವ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಾ. ಕೆ.ಎಸ್. ಜಯಪ್ಪ ಮಾತನಾಡಿದರು.
ಇದೇ ಸಂದರ್ಭದಲ್ಲಿ ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು.ಸ್ಥಳೀಯ ಕಾರ್ಪೊರೇಟರ್ ಗಣೇಶ್ ಕುಲಾಲ್ ವೇದಿಕೆಯಲ್ಲಿದ್ದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಜಿ. ರಾಜೇಶ್ ಸ್ವಾಗತಿಸಿದರು. ಪ್ರದೀಪ್ ಡಿ.ಎಂ. ನಿರೂಪಿಸಿದರು.