ವಿಟ್ಲ, ಜ 02(SM): ಕೇರಳ ರಾಜ್ಯದ ಸರ್ಕಾರಿ ಬಸ್ ಗೆ ಕಿಡಿಗೇಡಿಯೊಬ್ಬ ಕಲ್ಲು ತೂರಾಟ ನಡೆಸಿದ ಘಟನೆ ವಿಟ್ಲ ಸಮೀಪದ ಕೇಪು ಕಲ್ಲಂಗಳ ಆಶ್ರಮ ಶಾಲೆಯ ಸಮೀಪ ಬುಧವಾರ ನಡೆದಿದೆ. ಕೇರಳ ಕೆಎಸ್ ಆರ್ ಟಿಸಿ ಬಸ್ ಪುತ್ತೂರಿನಿಂದ ಕಾಸರಗೋಡಿಗೆ ತೆರಳುತ್ತಿತ್ತು. ಬಸ್ ಕೇಪು ಕಲ್ಲಂಗಳದ ಸಮೀಪ ತಲುಪುತ್ತಿದ್ದಂತೆ ಕಿಡಿಗೇಡಿಯೋರ್ವ ಕೃತ್ಯ ಎಸಗಿದ್ದಾನೆ.
ಸಾಂದರ್ಭಿಕ ಚಿತ್ರ
ವಿಟ್ಲ ಕಡೆಯಿಂದ ಕುದ್ದುಪದವು ಕಡೆಗೆ ತೆರಳುವ ಬೈಕ್ ವೊಂದು ಕೇಪು ದ್ವಾರದ ಬಳಿ ಬಸ್ಸನ್ನು ಹಿಂದಿಕ್ಕಿ ಮುಂದೆ ತೆರಳಿದೆ. ಆದರೆ, ಆಶ್ರಮ ಶಾಲೆಯ ಬಳಿ ಬಸ್ ತಲುಪುತ್ತಿದ್ದಂತೆ ಬಸ್ ನ ಮೇಲೆ ಏಕಾಏಕಿ ಕಲ್ಲು ಎಸೆಯಲಾಗಿದೆ. ತಕ್ಷಣ ಓರ್ವ ಅಲ್ಲಿಂದ ಬೈಕ್ ಏರಿ ಪರಾರಿಯಾಗಿದ್ದಾನೆ ಎಂದು ಬಸ್ ನಲ್ಲಿದ್ದ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇನ್ನು ಸೈಡ್ ಕೊಡುವ ವಿಚಾರವಾಗಲಿ, ಇನ್ನಿತ ವಿಚಾರದ ಬಗ್ಗೆ ಯಾವುದೇ ವಾಗ್ವಾದಗಳಾಗಿಲ್ಲ ಎಂದು ಬಸ್ ನಲ್ಲಿದ್ದವರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ವಿಟ್ಲ ಠಾಣೆಗೆ ದೂರು ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬಸ್ಸಿನಲ್ಲಿದ್ದ ಪ್ರಯಾಣಿಕರು ಕೆಲ ಕಾಲ ಬೇರೆ ಬಸ್ಸಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಇನ್ನು ಜನವರಿ 03ರಂದು ಕೇರಳ ರಾಜ್ಯದಲ್ಲಿ ಹರತಾಳಕ್ಕೆ ಕರೆ ನೀಡಲಾಗಿದ್ದು, ಇದೇ ವಿಚಾರಕ್ಕೆ ಸಂಬಂಧಿಸಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರಬಹುದೆಂದು ಶಂಕಿಸಲಾಗಿದೆ.