ಉಡುಪಿ, ಮೇ 03(DaijiworldNews/MS): ಪಿಎಸ್ಐ ನೇಮಕಾತಿ ಅಕ್ರಮದ ಕಿಂಗ್ ಪಿನ್ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಬಂಧನವಾದ ಬೆನ್ನಲ್ಲೇ ಕಾನೂನಾತ್ಮಕ ವಿಚಾರಣೆ ಮುಗಿಯುವ ಮೊದಲೇ ಗೃಹ ಇಲಾಖೆ 2020-21 ರ ನೇಮಕಾತಿಯನ್ನು ರದ್ದುಪಡಿಸಿ, ಮರು ಪರೀಕ್ಷೆಗೆ ಆದೇಶ ನೀಡಿರುವುದನ್ನು ಜಿಲ್ಲಾ ಕಾಂಗ್ರೆಸ್ ಖಂಡಿಸಿದೆ.
ಈ ಕುರಿತು ಉಡುಪಿ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿ, ಅಕ್ರಮ ನಡೆದಿದೆ ಎನ್ನುವುದಕ್ಕೆ ಸಾಕ್ಷ್ಯವಾಗಿ ಪ್ರಮುಖ ಆರೋಪಿ ಬಿಜೆಪಿ ನಾಯಕಿ ದಿವ್ಯಾ ಹಾಗರಗಿಯನ್ನು ಬಂಧಿಸಲಾಗಿದೆ. ಆದರೆ ಇಲ್ಲಿವರೆಗೆ ಕೊಠಡಿ ಮೇಲ್ವಾಚಾರಕರು ಹಾಗೂ ಸಂಬಂಧಪಟ್ಟ ಯಾವುದೇ ಇಲಾಖಾ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಲಿಲ್ಲ, ಪ್ರಕರಣ ದಾಖಲಾಗಿಲ್ಲ,ಯಾರೊಬ್ಬ ನೌಕರನನ್ನು ಬಂಧಿಸಿಲ್ಲ ನೇಮಕಾತಿ ಅಕ್ರಮ ಹಿನ್ನಲೆಯಲ್ಲಿ ಹಳೆಯ ನೇಮಕಾತಿ ರದ್ದುಗೊಳಿಸಿ ಹುದ್ದೆಗೆ ಮರು ಪರೀಕ್ಷೆ ನಡೆಸಲು ರಾಜ್ಯ ಸರಕಾರ ನಿರ್ಧಾರ ತೆಗೆದುಕೊಂಡಿದೆ. ತನಿಖೆಯ ಹಂತದಲ್ಲಿರುವಾಗಲೇ ಪಿ.ಎಸ್.ಐ ನೇಮಕಾತಿಯನ್ನೇ ರದ್ದುಗೊಳಿಸುವ ಮೂಲಕ ನಡೆದಿರುವ ಅಕ್ರಮವನ್ನು ಸರಕಾರ ಒಪ್ಪಿಕೊಂಡಂತಾಗಿದೆ ಎಂದು ಅಪಾದಿಸಿದ್ದಾರೆ.
ಪಿ.ಎಸ್.ಐ ನೇಮಕಾತಿಗೆ ಸರಕಾರ ಯಾವ ಆಧಾರದಲ್ಲಿ ಮರು ಪರೀಕ್ಷೆ ನಡೆಸುವ ತೀರ್ಮಾನ ಕೈಗೊಂಡಿದೆ ಎನ್ನುವುದನ್ನು ಮುಖ್ಯ ಮಂತ್ರಿಗಳು ಸ್ಪಷ್ಟಪಡಿಸಬೇಕು, ಆಕ್ರಮ ನಡೆಸುವ ಸಿಐಡಿ ತನಿಖೆಯಿಂದ ಸಾಬೀತಾಗಿದ್ದರೆ ತಕ್ಷಣ ಆ ವರದಿ ಬಿಡುಗಡೆ ಮಾಡಿ ಎಂದು ಪಕ್ಷ ಆಗ್ರಹಿಸುತ್ತದೆ. ಪರೀಕ್ಷೆ ನಿರ್ಧಾರವು ಪ್ರಮಾಣೀಕ ಅಭ್ಯರ್ಥಿಗಳಿಗೆ ನ್ಯಾಯ ಕೊಡಲೋ ಅಥವಾ ಹಗರಣವನ್ನು ಮುಚ್ಚುವಾಗುವ ಉದ್ದೇಶವೋ? ದಿವ್ಯಾ ನೀಡಿರುವ ಹೇಳಿಕೆಯಲ್ಲಿ ಯಾವ ಸಂಗತಿ ಅಡಗಿದೆ ಎನ್ನುವುದನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯ ಸರಕಾರ ಪ್ರತಿಯೊಂದರಲ್ಲೂ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಕಾಮಗಾರಿಗಳಿಗೆ ಸರಕಾರ 40% ಕಮಿಷನ್ ಬೇಡಿಕೆ ಇತ್ತಿದೆ' ಎಂದು ಆರೋಪ ಮಾಡಿದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಈ ಹಗರಣದ ತನಿಖೆಯು ಹೈಕೋರ್ಟು ನ್ಯಾಯಮೂರ್ತಿಗಳ ಮೇಲುಸ್ತುವಾರಿಯಲ್ಲಿ ನಡೆಯಬೇಕೆಂದು ಕಾಂಗ್ರೆಸ್ ಪಕ್ಷದ ಆಗ್ರಹವಾಗಿದೆ.ಆರೋಪಿ ದರ್ಶನ್ ಗೌಡ ವಿಚಾರಣೆ ವೇಳೆ ಪ್ರಭಾವಿ ಮಂತ್ರಿಯೋರ್ವರ ಸಹೋದರ ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಅವರ ತನಿಖೆಯನ್ನು ಸ್ಥಗಿತಗೊಳಿಸಿ ಬಿಡುಗಡೆ ಗೊಳಿಸಲಾಗಿದೆ. ಇಷ್ಟೆಲ್ಲಾ ಹಗರಣಗಳಿಗೆ ಕೇಂದ್ರದ ಮೌನವನ್ನು ಗಮನಿಸಿದರೆ ಪ್ರಧಾನಿ ಕಾರ್ಯಲಯವೇ ಭ್ರಷ್ಟ ವ್ಯವಸ್ಥೆಗೆ ಪೋಷಣೆ ನೀಡುತ್ತಿರುವುದು ಸ್ಪಷ್ಟ ವಾಗುತ್ತಿದೆ ಎಂದು ಹೇಳಿದ್ದಾರೆ.
ಜಿಲ್ಲಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಕುಶಲ್ ಶೆಟ್ಟಿ , ಜಿಲ್ಲಾ ವಕ್ತಾರರಾದ ಬಿಪಿನ್ ಚಂದ್ರ ಪಾಲ್ ಮತ್ತು ಭಾಸ್ಕರ್ ರಾವ್ ಕಿದಿಯೂರು ಉಪಸ್ಥಿತರಿದ್ದರು.