ಕಾಸರಗೋಡು, ಮೇ 02 (DaijiworldNews/SM): ಹೊಳೆಗಿಳಿದ ಮೂವರು ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಸೋಮವಾರ ಸಂಜೆ ಪಯಸ್ವಿನಿ ಹೊಳೆಯ ತೋನಿಕಡವು ಎಂಬಲ್ಲಿ ನಡೆದಿದೆ.
ಕುಂಡಂಗುಳಿ ಗದ್ದೆಮೂಲೆಯ ನಿತಿನ್(38), ಪತ್ನಿ ದೀಕ್ಷಾ(30) ಮತ್ತು ಸಂಬಂಧಿಕ 16ರ ಬಾಲಕ ಮೃತಪಟ್ಟಿದ್ದಾರೆ. ಸಂಜೆ 3 ಗಂಟೆ ಸುಮಾರಿಗೆ ಘಟನೆ ನಡೆದಿದೆ.
ನೀರಿನಲ್ಲಿ ಸಿಲುಕಿದ್ದ ದೀಕ್ಷಾಳನ್ನು ರಕ್ಷಿಸಲೆತ್ನಿಸಿದಾಗ ಇಬ್ಬರು ನೀರುಪಾಲಾಗಿದ್ದು, ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಪರಿಸರವಾಸಿಗಳು ಗಂಟೆಗಳ ಕಾಲ ನಡೆಸಿದ ಶೋಧದ ಬಳಿಕ ಮೂವರ ಮೃತದೇಹವನ್ನು ಮೇಲಕ್ಕೆತ್ತಲಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಗಲ್ಫ್ ನಿಂದ ಬಂದಿದ್ದ ನಿತಿನ್ ಹಾಗೂ ಕುಟುಂಬದ 9 ಮಂದಿ ಸಂಜೆ ಹೊಳೆ ಬದಿಗೆ ಬಂದಿದ್ದರು. ನಿತಿನ್ ಮತ್ತು ದೀಕ್ಷಾ ನೀರಿಗಿಳಿದಿದ್ದು, ಈ ಸಂದರ್ಭದಲ್ಲಿ ಮುಳುಗಿದ ದೀಕ್ಷಾಳನ್ನು ರಕ್ಷಿಸಲು ನಿತಿನ್ ಯತ್ನಿಸಿದರೂ ಸಾಧ್ಯವಾಗಲಿಲ್ಲ. ಇದರಿಂದ ಮನೀಶ್ ಕೂಡಾ ನೀರಿಗೆ ಹಾರಿದ್ದು, ನೀರಲ್ಲಿ ಸಿಲುಕಿದನ್ನು ಗಮನಿಸಿದ ಜೊತೆಗಿದ್ದವರ ಬೊಬ್ಬೆ ಕೇಳಿ ಧಾವಿಸಿ ಬಂದ ಪರಿಸರವಾಸಿಗಳು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಬಳಿಕ ನಡೆಸಿದ ಹುಡುಕಾಟದಿಂದ ಆರು ಗಂಟೆ ಸುಮಾರಿಗೆ ಮೂವರ ಮೃತದೇಹವನ್ನು ಮೇಲಕ್ಕೆತ್ತಲಾಯಿತು. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.