ಮಂಗಳೂರು, ಮೇ 02 (DaijiworldNews/MS): 'ಬಿಜೆಪಿಯೂ ತಾವು ಧರ್ಮದ ಹೆಸರಿನಲ್ಲಿ ಮತ ಗಳಿಸುತ್ತೇವೆ ಹೊರತು ಅಭಿವೃದ್ಧಿಯಿಂದಲ್ಲ ಎಂಬ ತಪ್ಪು ಕಲ್ಪನೆ ಹೊಂದಿದ್ದು, ಬಿಜೆಪಿ ಪಶ್ಚಾತ್ತಾಪ ಪಡುವ ದಿನ ಬರಲಿದೆ' ಎಂದು ಮಾಜಿ ಸಚಿವ ರಮಾನಾಥ್ ರೈ ಹೇಳಿದ್ದಾರೆ.
ಮೇ 2 ರ ಸೋಮವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, "ವಾಣಿಜ್ಯ ಎಲ್ಪಿಜಿ ಬೆಲೆ ಮತ್ತು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಿರುವುದು ಸಾರ್ವಜನಿಕರ ಮೇಲೆ ನೇರ ಪರಿಣಾಮ ಬೀರುತ್ತಿದೆ. ಬೆಲೆ ಏರಿಕೆ ನಿಯಂತ್ರಣದಲ್ಲಿ ಸರ್ಕಾರ ವಿಫಲವಾಗಿದೆ. ಕೇಂದ್ರ ಸರ್ಕಾರದ ನಿರ್ಲಕ್ಷ್ಯದಿಂದ ಸಾರ್ವಜನಿಕರಿಗೆ ಹೊರೆಯಾಗುತ್ತಿದೆ. ಇಂಧನ ಬೆಲೆ ಏರಿಕೆಗೆ ರಾಜ್ಯ ಸರ್ಕಾರಗಳೇ ಹೊಣೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮನಮೋಹನ್ ಸಿಂಗ್ ಸರ್ಕಾರವಿದ್ದಾಗ ಅಂದಿನ ವಿರೋಧ ಪಕ್ಷ ಬಿಜೆಪಿ ಇಂಧನ ಬೆಲೆ ಏರಿಕೆಯ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿತ್ತು. ಆಗಿನ ಕಾಂಗ್ರೆಸ್ ಸರ್ಕಾರ ರಾಜ್ಯ ಸರ್ಕಾರವನ್ನುಎಂದೂ ದೂಷಿಸಿರಲಿಲ್ಲ" ಎಂದು ರೈ ಬಿಜೆಪಿ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿತು. ಸಿದ್ದರಾಮಯ್ಯ ಆಡಳಿತದಲ್ಲಿದ್ದಾಗ ಮಾಡಿದ ಯೋಜನೆಗಳನ್ನು ಅನುಷ್ಠಾನಗೊಳಿಸುವ ಕಾರ್ಯವನ್ನಷ್ಟೆ ಪ್ರಸಕ್ತ ರಾಜ್ಯ ಸರಕಾರ ಮಾಡುತ್ತಿದೆ. ಇದಲ್ಲದೆ ತಾವು ರಾಜ್ಯದ ಅಭಿವೃದ್ಧಿಯಿಂದಲ್ಲ, ಧರ್ಮದ ಹೆಸರಿನಲ್ಲಿ ಮತ ಪಡೆಯುತ್ತೇವೆ ಎಂಬ ತಪ್ಪು ಕಲ್ಪನೆ ಬಿಜೆಪಿಗಿದೆ. ಆದರೆ ಇದಕ್ಕಾಗಿ ವಿಷಾದಿಸುವ ಸಮಯ ಶೀಘ್ರದಲ್ಲೇ ಬರಬಹುದು ಎಂದು ಎಚ್ಚರಿಸಿದ್ದಾರೆ.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಕಾಂಗ್ರೆಸ್ ಮುಖಂಡರಾದ ಶಶಿಧರ್ ಹೆಗಡೆ, ಅಪ್ಪಿ, ನವೀನ್ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು.