ಕಾರ್ಕಳ, ಮೇ 02 (DaijiworldNews/MS): ತಂದೆಗೆ ಸೇರಿದ ಜಾಗಕ್ಕೆ ತಾನೊಬ್ಬನೇ ವಾರಿಸುದಾರನೆಂದು ಸುಳ್ಳು ದಾಖಲೆ ಸೃಷ್ಠಿದ ಆರೋಪಿಯೊಬ್ಬನ ವಿರುದ್ಧ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೂಡಾದ ಆಶ್ರಯ ಕಾಲೋನಿಯ ಭಾಗೀರಥಿ (52) ಪ್ರಕರಣದ ದೂರುದಾರರು. ಇವರ ತಂದೆ ಮಾಯಿಲ ಅಸ್ಲರ್ಯವರಿಗೆ ಅದೇ ಗ್ರಾಮದ ಸರ್ವೆ ನಂಬ್ರ 224/1ರಲ್ಲಿ 2 ಎಕ್ರೆ 26 ಸೆಂಟ್ಸ್ ಜಾಗ ಸಾಗುವಳಿ ಚೀಟಿ ಮೂಲಕ ಮಂಜೂರಾಗಿತ್ತು. ಮಾಯಿಲ ಅಸ್ಲರ್ ರವರು ಜೀವಿತ ಕಾಲದಲ್ಲಿ ಜಾಗವನ್ನು ಯಾವುದೇ ದಾಖಲೆಗಳನ್ನು ಮಾಡಿಸದೇ 1979 ಮೇ 10ರಂದು ಮೃತಪಟ್ಟಿದ್ದರು.
ದೂರುದಾರೆ ಭಾಗೀರಥಿಯ ತಮ್ಮ ಶಂಕರ ಮೇರ ತನ್ನ ಸಹೋದರಿಯರಾದ ಭಾಗೀರಥಿ, ಭವಾನಿ, ಗುಲಾಬಿ, ವಿನೋದ ಇವರುಗಳಿಗೆ ಮೋಸ ಮತ್ತು ವಂಚನೆ ಮಾಡುವ ಉದ್ದದೇಶದಿಂದಲೇ ತನ್ನ ತಂದೆ, ತಾಯಿಯವರಿಗೆ ತಾನೊಬ್ಬನೇ ವಾರಸುದಾರರ ಎಂದು ಊರಿನ ಸ್ಥಳೀಯರ ಜೊತೆ ಸೇರಿ ಸುಳ್ಳು ದಾಖಲೆಯನ್ನು ಸೃಷ್ಠಿಸಿದ್ದಾನೆ ಎಂದು ದೂರಿನಲ್ಲಿ ವಿವರಿಸಿದ್ದಾರೆ. ಆ ಮೂಲಕ ಪಿತ್ರಾರ್ಜಿತಾ ಹಕ್ಕಿನ ಆಸ್ತಿಯನ್ನು ಲಪಟಾಯಿಸಿ ಮೋಸ ಮಾಡಿರುವುದಾಗಿ ವಿವರಿಸಿದ್ದಾರೆ.