ಕಾರ್ಕಳ, ಮೇ 02 (DaijiworldNews/MS): ಜೋಡುರಸ್ತೆಯ ಪೂರ್ಣಿಮಾ ಪ್ರೈಮ್ ಸಂಸ್ಥೆಯ ಮೇಲ್ವಿಚಾರಕರಿಗೆ ಹಲ್ಲೆಗೈದ ಮೂವರು ರಿಕ್ಷಾ ಚಾಲಕರನ್ನು ನಗರ ಠಾಣಾ ಪೊಲೀಸರು ವಶಕ್ಕೆ ತೆಗೆದಿದ್ದು, ಕೃತ್ಯಕ್ಕೆ ಬಳಸಲಾಗಿದ್ದ ರಿಕ್ಷಾಗಳನ್ನು ಜಪ್ತಿಪಡಿಸಲಾಗಿದೆ.
ಜೋಡುರಸ್ತೆಯ ಪೂರ್ಣಿಮಾ ಸಿಲ್ಕ್ಸ್ ನಲ್ಲಿ ಮೇಲ್ವಿಚಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಯೋಗೀಶ್ ನಾಯಕ(47) ಘಟನೆಯಲ್ಲಿ ಗಾಯಗೊಂಡವರು.
ಎಪ್ರಿಲ್ 29ರಂದು ಸಂಜೆ 6 ಗಂಟೆಗೆ ಈ ಘಟನೆ ನಡೆದಿದೆ. ಆರೋಪಿ ಗಳಾದ ಪದ್ಮನಾಭ ಶೆಟ್ಟಿಗಾರ, ಮನೋಜ, ಫಾಸ್ಕರ್ ಸಮಾನ ದುರುದ್ದೇಶ ಹೊಂದಿ ಈ ಕೃತ್ಯ ಎಸಗಿದ್ದಾರೆ.
ಯೋಗೀಶ್ ನಾಯಕ್ ಅವರು ತನ್ನ ಬೈಕ್ನಲ್ಲಿ ಜೋಡುರಸ್ತೆ ಪೂರ್ಣಿಮಾ ಸಿಲ್ಕ್ಸ್ನಿಂದ ಅದೇ ಸಂಸ್ಥೆಗೆ ಸೇರಿದ ರಸ್ತೆಯ ಮತ್ತೊಂದು ಪಾರ್ಶ್ವದಲ್ಲಿ ಇರುವ ಪೂರ್ಣಿಮಾ ಪ್ರೈಮ್ ಮಾಲ್ಗೆ ಕೆಲಸದ ನಿಮಿತ್ತ ಹೋಗಿ ಹಿಂತಿರುಗುತ್ತಾ ಸಂದರ್ಭದಲ್ಲಿ ಆರೋಪಿಗಳು ಈ ಕೃತ್ಯವೆಸಗಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪಿತರು ರಿಕ್ಷಾ ಬಾಡಿಗೆಯನ್ನು ತಮಗೆ ನೀಡದೇ ಬೇರೆಯವರಿಗೆ ನೀಡುತ್ತಿದ್ದೀಯಾ? ಎಂದು ಪ್ರಶ್ನಿಸಿ ಹಿಗ್ಗಾಮುಗ್ಗ ಥಳಿಸಿ, ಗುದ್ದಿ ಗಾಯಗೊಳಿಸಿದ್ದರು. ಗಾಯಾಳು ಕಾರ್ಕಳದ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಜೋಡುರಸ್ತೆ ತಾಲೂಕು ತಾಲೂಕಿನ ಪ್ರಮುಖ ವಾಣಿಜ್ಯ ಕೇಂದ್ರವಾಗಿ ಪರಿಣಮಿಸಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನಗರ ಠಾಣಾಧಿಕಾರಿಯವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.