ಉಡುಪಿ, ಮೇ 02 (DaijiworldNews/DB): ಬಿಜೆಪಿ ಪಕ್ಷದ ರೀಚಾರ್ಜ್ ನಮ್ಮ ಭೂತ್ಗಳಲ್ಲಿ ನಡೆಯುತ್ತದೆ. ಪಕ್ಷದ ರೀ ಚಾರ್ಜಿಂಗ್ ಸೆಂಟರ್ ನಮ್ಮ ಕಾರ್ಯಕರ್ತನ ಕೈಯಲ್ಲಿದೆ ಎಂದು ಸಚಿವ ವಿ. ಸುನಿಲ್ಕುಮಾರ್ ಹೇಳಿದ್ದಾರೆ.
ಪಕ್ಷದಲ್ಲಿ ಹೊಸತನಕ್ಕೆ ಆದ್ಯತೆ ನೀಡುವ ಬಿಜೆಪಿ ಮುಖಂಡ ಬಿ.ಎಲ್. ಸಂತೋಷ್ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಸೋಮವಾರ ಉತ್ತರಿಸಿದ ಅವರು, ಬೂತ್ ಮತ್ತು ಕಾರ್ಯಕರ್ತರನ್ನು ರಿಚಾರ್ಜ್ ಮಾಡುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತದೆ. ಯಾರ ಹೇಳಿಕೆಗಳ ಮೂಲಕ ನಾವು ರಿಚಾರ್ಜ್ ಆಗುವುದಿಲ್ಲ. ನಮ್ಮ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ರಿಚಾರ್ಜ್ ಆಗುತ್ತಾರೆ ಎಂದರು.
ಹೊಸತನ ನಮ್ಮ ಸಂಘಟನೆಯ ಮೂಲ ಸ್ವರೂಪದಲ್ಲಿದೆ. ಪ್ರತಿಯೊಬ್ಬ ಕಾರ್ಯಕರ್ತನಲ್ಲಿ ಹೊಸತನ ಇದೆ. ಕಾರ್ಯಕರ್ತರ ಹೊಸತನವನ್ನು ಸಂಘಟನೆಗೆ ಸಮಾಜಕ್ಕೆ ಪೂರಕವಾಗಿ ಬಳಸುತ್ತೇವೆ. ನಮ್ಮ ಸಂಘಟನೆಗಳಲ್ಲಿ ಇರುವಷ್ಟು ಹೊಸತನ ಬೇರೆ ಯಾವ ಸಂಘಟನೆಯಲ್ಲೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಹೊಸತನಕ್ಕೆ ಅವಕಾಶ ನಿರಂತರವಾದ ಪ್ರಕ್ರಿಯೆ.
ಹಳೇಬೇರು ಹೊಸ ಚಿಗುರು ಇದ್ದರೇನೇ ಒಳ್ಳೆಯದು ಎನ್ನುವ ಗಾದೆ ಇದೆಯಲ್ಲ ಕಾಂಗ್ರೆಸ್ ತರ ನಾವು ಒಂದೇ ಮರಕ್ಕೆ ಜೋತು ಬೀಳುವವರಲ್ಲ ಎಂದವರು ಇದೇ ವೇಳೆ ಕಾಂಗ್ರೆಸ್ಗೆ ಟಾಂಗ್ ನೀಡಿದರು.
ಅಝಾನ್ ವರ್ಸಸ್ ಭಜನೆ ಶ್ರೀರಾಮಸೇನೆ ಅಭಿಯಾನ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎಲ್ಲಾ ಸಂಘಟನೆಗಳ ಚಟುವಟಿಕೆಗೆ ನಾನೇನು ಪ್ರತಿಕ್ರಿಯೆ ನೀಡಬೇಕು? ಸರ್ಕಾರ ಎಲ್ಲ ಬೆಳವಣಿಗೆಗಳನ್ನು ಎಚ್ಚರಿಕೆಯಿಂದ ಗಮನಿಸುತ್ತಿದೆ. ನೂರಾರು ಹೇಳಿಕೆಗಳು ಬರುತ್ತವೆ. ಎಲ್ಲದಕ್ಕೂ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ಸಂಬಂಧಪಟ್ಟ ಇಲಾಖಾಧಿಕಾರಿಗಳು, ಸಚಿವರು ಇದರ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ನ್ಯಾಯಾಲಯದ ತೀರ್ಪು ಅನುಷ್ಠಾನ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ಸಂಘರ್ಷ -ಶಾಂತಿ ಅವ್ಯವಸ್ಥೆಗೆ ಯಾವುದೇ ಕಾರಣಕ್ಕೂ ನಮ್ಮ ರಾಜ್ಯದಲ್ಲಿ ಆಸ್ಪದ ಕೊಡುವುದಿಲ್ಲ ಎಂದು ತಿಳಿಸಿದರು.
ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟ ವಿಚಾರವಾಗಿ ಮಾತನಾಡಿದ ಅವರು, ಕನ್ನಡ ವಿರೋಧಿ ಚಟುವಟಿಕೆಯನ್ನು ಯಾರು ಮಾಡಿದರೂ ಸಹಿಸುವುದಿಲ್ಲ. ಈ ಬಗ್ಗೆ ಹತ್ತಾರು ಸಲ ನಾವು ಹೇಳಿದ್ದೇವೆ. ಈ ಹಿಂದೆ ಘಟನೆಗಳಾದಾಗ ಗೃಹ ಇಲಾಖೆ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ. ಪ್ರಚೋದನಕಾರಿ ಪೋಸ್ಟರ್ ಹಾಕಿದರೆ ಜಿಲ್ಲಾಡಳಿತ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತದೆ. ಕನ್ನಡ ಅಭಿಮಾನಕ್ಕೆ ತೊಂದರೆಯಾಗದಂತೆ ಸರಕಾರ ನೋಡಿಕೊಳ್ಳುತ್ತೆತದೆ. ಯಾವುದೇ ಸಂಘಟನೆಗಳು ಈ ಕೃತ್ಯ ಮಾಡಿದರು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಹಿಂದಿ ಹೇರಿಕೆ ಪ್ರಶ್ನೆಯೇ ಬರುವುದಿಲ್ಲ. ಇದನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ನಮ್ಮ ಮಾತೃಭಾಷೆ ಕನ್ನಡ. ಮಾತೃ ಭಾಷೆ ಬಳಕೆ ಮಾಡುವುದು ನಮ್ಮ ಹಕ್ಕು. ಬೇರೆ ರಾಜ್ಯದ ಸಂಪರ್ಕ ಸಾಧಿಸಲು ಹಿಂದಿ ಬಳಸಿ ಎಂದಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ ಅವರು, ಕನ್ನಡ ಬಿಟ್ಟು ಬೇರೆ ಮಾತನಾಡಿ ಎಂದು ಎಲ್ಲೂ ಹೇಳಿಲ್ಲ.ಕರ್ನಾಟಕದಲ್ಲಿ ಕನ್ನಡವೇ ಪ್ರಾಧಾನ್ಯ. ಬೇರೆ ರಾಜ್ಯದ ಜೊತೆ ಸರಕಾರಿ ವ್ಯವಹಾರ ಮಾಡಲು ಹಿಂದಿ ಬಳಸಿ ಎಂದಿದ್ದಾರೆ. ಕೇಂದ್ರ ಸರ್ಕಾರದ ನಿಲುವಿನಲ್ಲಿ ತಪ್ಪೇನಿದೆ? ಅನಗತ್ಯ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯಗೆ 20 ಕ್ಷೇತ್ರಗಳಿಂದ ಚುನಾವಣೆ ಸ್ಪರ್ಧಿಸಲು ಬೇಡಿಕೆ ವಿಚಾರವಾಗಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಳೆದ ಬಾರಿ ಎರಡು ಕಡೆ ಚುನಾವಣೆಗೆ ನಿಂತಿದ್ದರು. ಒಂದು ಕಡೆ ಸೋತು ಮತ್ತೊಂದು ಕಡೆ ಕಷ್ಟದಿಂದ ಗೆದ್ದಿದ್ದರು. 20 ಕಡೆ ನಿಲ್ಲಲು ಯಾರು ಸಲಹೆ ಕೊಡುತ್ತಾರೋ ಗೊತ್ತಿಲ್ಲ. ಎಷ್ಟು ಕಡೆಯಿಂದ ಆಕಾಶ ಕೊಡಬೇಕು ಎಂದು ಚುನಾವಣಾ ಆಯೋಗ ನಿರ್ಧಾರ ಮಾಡಲಿ. 20 ಕಡೆ ಒಬ್ಬನೇ ವ್ಯಕ್ತಿಯನ್ನು ನಿಲ್ಲಿಸುವ ದಾರಿದ್ರ್ಯ ಕಾಂಗ್ರೆಸ್ಸಿಗೆ ಬಂದಿದೆ ಅಂದರೆ ಬೇರೆ ಕಡೆ ಅಭ್ಯರ್ಥಿಗಳೇ ಇಲ್ಲ ಎಂದ ಹಾಗಾಯಿತು. ಕಾಂಗ್ರೆಸ್ಸಿನಲ್ಲಿ ಅಭ್ಯರ್ಥಿಗಳ ಕೊರತೆ ಇದೆ ಎಂದೇ ಇದರಿಂದ ಗೊತ್ತಾಗುತ್ತದೆ. ಆ ಪಕ್ಷವನ್ನು ಭಗವಂತನೇ ಕಾಪಾಡಬೇಕುಎಂದು ಲೇವಡಿ ಮಾಡಿದರು.
ಪ್ರಿಯಾಂಕ ಖರ್ಗೆ ಪ್ರತಿಯೊಂದು ವಿಷಯಕ್ಕೂ ಗಾಳಿಯಲ್ಲಿ ತೇಲಿಸಿ ದಾಖಲೆಗಳಿಲ್ಲದೆ ಮಾತನಾಡುತ್ತಾರೆ. ಗಂಭೀರ ಆರೋಪಗಳನ್ನು ಯಾವತ್ತೂ ಮಾಡಿಲ್ಲ. ಬಿಟ್ ಕಾಯಿನ್ ವಿಷಯದಲ್ಲೂ ಕೋಟ್ಯಾಂತರ ರೂಪಾಯಿ ಅವ್ಯವಹಾರ ಆಗಿದೆ ಎಂದರು. ಅದರ ಬಗೆಗೂ ಯಾವುದೇ ದಾಖಲೆಗಳನ್ನು ಕೊಟ್ಟಿಲ್ಲ. ಪ್ರಚಾರದ ಹುಚ್ಚು ಇರುವುದರಿಂದ ನಿರಂತರ ಪತ್ರಿಕಾಗೋಷ್ಠಿ ಮಾಡುತ್ತಾರೆ. ಬಿಟ್ ಕಾಯಿನ್ ವಿಚಾರದಲ್ಲಿ ಸಾಧಿಸಿದ್ದೇನು? ತನ್ನ ಮೇಲೆ ಬಂದ ಆರೋಪಗಳನ್ನು ಅಲ್ಲಗಳೆಯಲು ಈ ರೀತಿ ಮಾತನಾಡುತ್ತಾರೆ. ಪೊಲೀಸರಿಗೆ ಸಿಗದ ವಾಯ್ಸ ರೆಕಾರ್ಡ್ ಇವರಿಗೆ ಹೇಗೆ ಸಿಗುತ್ತದೆ ಎಂದು ಸುನಿಲ್ಕುಮಾರ್ ಪ್ರಶ್ನಿಸಿದರು.
ಇವರ ಹುನ್ನಾರ ಇಲ್ಲದೆ ಇಷ್ಟೆಲ್ಲಾ ನಡೆಯಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಪ್ರಿಯಾಂಕ ಖರ್ಗೆ ತನಿಖೆಯಾಗಬೇಕು ಎಂದು ಹೇಳಿದ್ದೆ. ನೋಟೀಸು ಕೊಟ್ಟರೆ ಉತ್ತರ ಕೊಡಲ್ಲ ಎನ್ನುತ್ತಾರೆ. ಇದು ಪಲಾಯನವಾದ ಅಲ್ಲದೆ ಮತ್ತೇನು? ತಲೆಮರೆಸಿಕೊಂಡ ಆರೋಪಿಗಳ ರೀತಿಯಲ್ಲೇ ವರ್ತಿಸುತ್ತಾರೆ ಎಂದು ಪ್ರಿಯಾಂಕ್ ಖರ್ಗೆ ವಿರುದ್ದ ಅವರು ವಾಗ್ದಾಳಿ ನಡೆಸಿದರು.