ಉಡುಪಿ, ಅ 22: ಕರಾವಳಿಯ ಹಿರಿಯ ನಾಗಸ್ವರ ಕಲಾವಿದ ಓಬು ಸೇರಿಗಾರ (83)ಶನಿವಾರ ರಾತ್ರಿ ನಿಧನರಾಗಿದ್ದಾರೆ.
ಉಡುಪಿಯ ಕೃಷ್ಣ ಮಠದಲ್ಲಿ 50 ವರ್ಷಗಳಿಗೂ ಅಧಿಕ ಕಾಲ ಆಸ್ಥಾನ ಕಲಾವಿದರಾಗಿ ತಮ್ಮ ಅಮೂಲ್ಯ ಸೇವೆ ಸಲ್ಲಿಸಿ ಅಷ್ಟಮಠಾಧೀಶರುಗಳ ಪ್ರಶಂಸೆಗೆ ಪಾತ್ರರಾಗಿದ್ದ ಓಬು ಸೇರಿಗಾರ್ ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನ ಸೇರಿದಂತೆ ಸ್ಥಳೀಯ ಆಸುಪಾಸಿನ ಅನೇಕ ದೇವಸ್ಥಾನಗಳಲ್ಲೂ ತಮ್ಮಕಲಾಸೇವೆ ಸಲ್ಲಿಸಿದ್ದರು.
ಕಾಂಚನ ವೆಂಕಟಸುಬ್ರಹ್ಮಣ್ಯ ಅಯ್ಯರ್ ಅವರಲ್ಲಿ ಶಾಸ್ತ್ರೀಯ ಸಂಗೀತ ಶಿಕ್ಷಣ ಪಡೆದ ಓಬು ಸೇರಿಗಾರ್ ,ತಮ್ಮ ಶುದ್ಧ ,ಸಂಪ್ರದಾಯ ಬದ್ಧ ನಾಗಸ್ವರ ಸ್ಯಾಕ್ಸೋಫೋನ್ ವಾದನದಿಂದ ಪ್ರಸಿದ್ಧರಾಗಿದ್ದರು.
ಕಲಾಸೇವೆಯ ಜೊತೆಗೆ ಸುಮಾರು 160ಕ್ಕಿಂತಲೂ ಅಧಿಕ ಶಿಷ್ಯರಿಗೆ ವಾದ್ಯವಿದ್ಯೆಯನ್ನು ಶ್ರದ್ಧೆಯಿಂದ ಧಾರೆಯೆರೆದು ಕರಾವಳಿ ಜಿಲ್ಲೆಗಳಲ್ಲಿ ವಾದ್ಯ ಸಂಗೀತ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ಸಲ್ಲಿಸಿದ್ದರು.ತಮ್ಮ ಕಲಾಸೇವೆಗಾಗಿ ಉಡುಪಿಯ ಅಷ್ಟಮಠಾಧೀಶರು ವಿಶೇಷ ಗೌರವಕ್ಕೆ ಪಾತ್ರರಾಗಿದ್ದ ಅವರನ್ನು ಸಂಸ್ಕಾರ ಭಾರತಿ ಉಡುಪಿ, ಕಲಾವೃಂದ (ರಿ), ರಾಗಧನ (ರಿ)ಸೇರಿದಂತೆ ಅನೇಕ ಸಂಘಸಂಸ್ಥೆಗಳು ಸನ್ಮಾನಿಸಿದ್ದರು.ಉಡುಪಿಯಲ್ಲಿ ಸಾರ್ವಜನಿಕರು ಮತ್ತು ಅವರ ಶಿಷ್ಯರು 2008ರಲ್ಲಿ ಉಡುಪಿ ರಥಬೀದಿಯಲ್ಲಿ ವೈಭವದಿಂದ ಅಭಿನಂದಿಸಿ ಗೌರವಿಸಿದ್ದರು. ಮೃತರು ಪತ್ನಿ ,ಪುತ್ರಿ ಮತ್ತು ಅಪಾರ ಶಿಷ್ಯವೃಂದವನ್ನು ಅಗಲಿದ್ದಾರೆ.