ಕಾಸರಗೋಡು, ಮೇ 02 (DaijiworldNews/MS): ಶವರ್ಮ ಸೇವಿಸಿದ ವಿದ್ಯಾರ್ಥಿನಿ ಮೃತಪಟ್ಟ ಘಟನೆಗೆ ಸಂಬಂಧ ಪಟ್ಟಂತೆ ಇಬ್ಬರನ್ನು ಬಂಧಿಸಲಾಗಿದೆ. ಚೆರ್ವತ್ತೂರು ಐಡಿಯಲ್ ಫುಡ್ ಪಾಯಿಂಟ್ ಕೂಲ್ ಬಾರ್ ನ ಪಾಲುದಾರ ಸೇರಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಈ ನಡುವೆ ಫುಡ್ ಪಾಯಿಂಟ್ ನ ವಾಹನ ಅಗ್ನಿಗಾಹುತಿಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಓಮ್ನಿ ವ್ಯಾನ್ ಸಂಪೂರ್ಣ ಉರಿದಿದೆ. ಈ ನಡುವೆ ಸಂಸ್ಥೆಯ ಗಾಜುಗಳನ್ನು ಕಲ್ಲೆಸೆದು ಹುಡಿ ಮಾಡಿರುವುದು ಕಂಡುಬಂದಿದೆ.
ಈ ಫುಡ್ ಫಾಯಿಂಟ್ ಕೂಲ್ ಬಾರ್ ನಿಂದ ಶವರ್ಮ ಸೇವಿಸಿದ್ದ ಪ್ಲಸ್ ವನ್ ವಿದ್ಯಾರ್ಥಿನಿ ಚೆರ್ವತ್ತೂರು ಪೇರಳದ ದೇವಾನಂದ ( 16) ಭಾನುವಾರ ಮಧ್ಯಾಹ್ನ ಮೃತಪಟ್ಟಿದ್ದಳು . ಏಪ್ರಿಲ್ 29 ಮತ್ತು 30 ರಂದು ಇಲ್ಲಿಂದ ಶವರ್ಮ ಸೇವಿಸಿದ್ದ 46 ಮಂದಿ ಈಗಾಗಲೇ ಅಸ್ವಸ್ಥ ಗೊಂಡಿದ್ದಾರೆ.
ಈ ಪೈಕಿ ಬಹುತೇಕ ವಿದ್ಯಾರ್ಥಿಗಳು. ಶವರ್ಮ ತಿಂದ ಕೆಲ ಗಂಟೆಗಳಲ್ಲಿ ವಾಂತಿ , ಜ್ವರ , ತಲೆ ನೋವು ಹಾಗೂ ಇನ್ನಿತರ ಅಸ್ವಸ್ಥತೆ ಕಂಡು ಬಂದಿದ್ದು , ಜಿಲ್ಲಾಸ್ಪತ್ರೆ ಸೇರಿದಂತೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ . ದೇವಾನಂದಳಿಗೆ ಭಾನುವಾರ ಬೆಳಿಗ್ಗೆ ಅಸ್ವಸ್ಥತೆ ಕಂಡುಬಂದಿದ್ದು , ಬಳಿಕ ಚೆರ್ವತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಮಧ್ಯಾಹ್ನದ ವೇಳೆಗೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಳು.
ಮೃತದೇಹ ಮರಣೋತ್ತರ ಪರೀಕ್ಷೆ ಇಂದು ಕಣ್ಣೂರು ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆಯಲಿದೆ. ಜಿಲ್ಲಾಸ್ಪತ್ರೆಯಲ್ಲಿ 39 ಮತ್ತು ಚೆರ್ವತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 9 ಮಂದಿ ಚಿಕಿತ್ಸೆಯಲ್ಲಿದ್ದಾರೆ.
ಈ ನಡುವೆ ಈ ಸಂಸ್ಥೆಗೆ ಆಹಾರ ಸುರಕ್ಷತಾ ಇಲಾಖೆಯ ಲೈಸನ್ಸ್ ಇಲ್ಲ ಎಂದು ತನಿಖೆಯಿಂದ ತಿಳಿದುಬಂದಿದೆ. ಕೂಲ್ ಬಾರ್ ನಿಂದ ಆಹಾರ ವಸ್ತುಗಳ ಸ್ಯಾಂಪಲನ್ನು ತಪಾಸಣೆಗೆ ಕೊಚ್ಚಿಗೆ ಕಳುಹಿಸಲಾಗಿದೆ