ಕಡಬ, ಮೇ 02 (DaijiworldNews/DB): ಕಾನೂನುಬಾಹಿರವಾಗಿ ಜಾನುವಾರು ವಧೆ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಕಡಬ ಪೊಲೀಸರು ತಾಲೂಕಿನ ಕಲಾರ ಹತ್ತಿರದ ತಿಮರಡ್ಡ ಎಂಬಲ್ಲಿನ ಮನೆಯೊಂದಕ್ಕೆ ದಾಳಿ ನಡೆಸಿ ತಲೆ ತುಂಡರಿಸಿದ ಸ್ಥಿತಿಯಲ್ಲಿದ್ದ ಜಾನುವಾರು ಮತ್ತು ಅದಕ್ಕೆ ಬಳಸಲಾದ ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ.
ಕಡಬ ಎಸ್ಐ ಆಂಜನೇಯ ರೆಡ್ಡಿ, ಎಎಸ್ಐ ಸುರೇಶ್ ಸಿ.ಟಿ. ಮತ್ತು ತಂಡ ದಾಳಿ ನಡೆಸಿದ್ದರು. ಆರೋಪಿ ಫಾರೂಕ್ ಮತ್ತು ಇತರರು ಈ ಕೃತ್ಯದಲ್ಲಿ ಭಾಗಿಯಾಗಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು.
ವಧೆ ಮಾಡಲೆಂದು ಕಟ್ಟಿ ಇಡಲಾದ ಇತರ ಜಾನುವಾರುಗಳನ್ನು ಕೂಡಾ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸ್ಥಳೀಯರು ತಮ್ಮ ಪ್ರಾಣಿಗಳನ್ನು ಗುರುತಿಸಿ ದಾಖಲೆ ತೋರಿಸಿದ ಮೇಲೆ ಎರಡು ಜಾನುವಾರುಗಳನ್ನು ಕೊಂಡೊಯ್ಯಲು ಪೊಲೀಸರು ಅನುಮತಿ ನೀಡಿದ್ದಾರೆ.
ಕಡಬ ಪ್ರಖಂಡದ ವಿಶ್ವಹಿಂದು ಪರಿಷತ್ ಅಧ್ಯಕ್ಷ ರಾಧಾಕೃಷ್ಣ ಕೊಳ್ಪೆ ಮಾತನಾಡಿ, ಇಲ್ಲಿ ಅಕ್ರಮ ಜಾನುವಾರು ವಧೆ ನಿರಂತರವಾಗಿ ನಡೆಯುತ್ತಿದೆ. ಇದರಿಂದ ಸಮಾಜದ ಶಾಂತಿ, ಸಾಮರಸ್ಯಕ್ಕೆ ಭಂಗ ಉಂಟಾಗುತ್ತಿದೆ. ತತ್ಕ್ಷಣ ಇಂತಹ ಕಾನೂನುಬಾಹಿರ ಕೃತ್ಯಗಳನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.