ಮಂಗಳೂರು, ಮೇ 02 (DaijiworldNews/DB): ಕರಾವಳಿಯಲ್ಲಿ ಉರಿ ಬಿಸಿಲಿನ ನಡುವೆಯೇ ರಾತ್ರಿ ಹೊತ್ತಿನಲ್ಲಿ ಮಳೆರಾಯ ತಂಪೆರೆದಿದ್ದಾನೆ. ದ.ಕ. ಜಿಲ್ಲೆಯ ವಿವಿಧೆಡೆಗಳಲ್ಲಿ ಭಾನುವಾರ ರಾತ್ರಿ ಗುಡುಗು, ಸಿಡಿಲು ಸಹಿತ ಮಳೆಯಾಗಿದ್ದು, ಕೆಲವೆಡೆ ಮಳೆ, ಗಾಳಿಯಿಂದಾಗಿ ಹಾನಿ ಸಂಭವಿಸಿದೆ.
ಸುಳ್ಯ ತಾಲೂಕಿನ ಕಲ್ಮಡ್ಕ, ಉಬರಡ್ಕ, ಮರ್ಕಂಜ, ಬಳ್ಪ, ಪಂಜ ಮುಂತಾದೆಡೆಗಳಲ್ಲಿ ನಿರಂತರವಾಗಿ ಕಳೆದ ಮೂರು ದಿನಗಳಿಂದ ಮಳೆಯಾಗುತ್ತಿದೆ. ಪಂಜುಕಲ್ಲು, ಪಂಬೆತ್ತಾಡಿಗಳಲ್ಲಿ ಗಾಳಿ, ಮಿಂಚು ಸಹಿತ ಮಳೆ ಬಂದಿದೆ. ಕಲ್ಮಡ್ಕದ ಉಡುವೆಕೋಡಿಯಲ್ಲಿ ಕುಂಞಣ್ಣ ನಾಯ್ಕ ಎಂಬವರ ಮನೆಗೆ ಮರ ಬಿದ್ದು ಸಂಪೂರ್ಣ ಹಾನಿಯಾಗಿದೆ. ಮನೆಯೊಳಗೆ ಯಾರೂ ಇರದಿದ್ದ ಕಾರಣ ಸಂಭಾವ್ಯ ಅಪಾಯ ತಪ್ಪಿದೆ. ಕೂತ್ಕುಂಜ ಗ್ರಾಮದ ನಾಗತೀರ್ಥ ಶೇಷಪ್ಪ ಎಂಬವರ ಮನೆಗೆ ತೆಂಗಿನ ಮರ ಬಿದ್ದು ಹಾನಿ ಉಂಟಾಗಿದೆ. ಪಂಜದ ಕಂರ್ಬಿ ಪರಿಸರದಲ್ಲಿ ಭಾರೀ ಗಾಳಿ ಮಳೆಯ ಪರಿಣಾಮ ಅಡಿಕೆ ಮರಗಳು ಧರಾಶಾಹಿಯಾಗಿವೆ. ವಿದ್ಯುತ್ ಕಂಬ, ತಂತಿಗಳಿಗೂ ಹಾನಿ ಉಂಟಾಗಿದೆ. ಇನ್ನು ಅನೇಕ ಕಡೆಗಳಲ್ಲಿ ಮನೆ, ಕೊಟ್ಟಿಗೆ ಮೇಲೆ ತೆಂಗಿನ ಮರ ಬಿದ್ದು ಹಾನಿ ಸಂಭವಿಸಿದೆ.
ಬಂಟ್ವಾಳ, ಮಂಗಳೂರು ತಾಲೂಕಿನ ಕೆಲವೆಡೆಯೂ ಬೆಳಗ್ಗೆ ಮಳೆ ಬಂದಿದೆ.