ಮಂಗಳೂರು, ಮೇ 01 (DaijiworldNews/HR): ಕರಾವಳಿಯ ಮುಂಚೂಣಿ ಟಿವಿ ವಾಹಿನಿ "ದಾಯ್ಜಿವಲ್ಡ್" ನಲ್ಲಿ ಪನಾಮ ಕಾರ್ಪೊರೇಷನ್ ಲಿಮಿಟೆಡ್ ಪ್ರಾಯೋಜಕತ್ವದಲ್ಲಿ ಆರಂಭವಾದ "ಕಾಮಿಡಿ ರಾಜೆ/ ರಾಣಿ " ಹಾಸ್ಯ ರಿಯಾಲಿಟಿ ಶೋನ ಕಾಮಿಡಿ ರಾಜೆ ಪ್ರಶಸ್ತಿಯನ್ನು ಹರ್ಷಿತ್ ಶೆಟ್ಟಿ ಗೆದ್ದಿದ್ದಾರೆ.
ಮಂಗಳೂರಿನ ಡಾನ್ ಬೋಸ್ಕೊ ಸಭಾಂಗಣದಲ್ಲಿ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ಸನ್ ಪ್ರೀಮಿಯಂ ರಿಫೈನ್ಡ್ ಸನ್ಫ್ಲವರ್ ಆಯಿಲ್ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಮತ್ತು ಶ್ರೀ ಸಾಂಬಶಿವ ರಾವ್ ಅವರು 50,000 ರೂಪಾಯಿ ನಗದು ಬಹುಮಾನದೊಂದಿಗೆ ಹರ್ಷಿತ್ ಶೆಟ್ಟಿ ಅವರಿಗೆ ಪ್ರಶಸ್ತಿಯನ್ನು ನೀಡಿದ್ದಾರೆ.
ಈ ವೇಳೆ ದಾಯ್ಜಿವಲ್ಡ್ ವಾಹಿನಿಯ ಸಂಸ್ಥಾಪಕರಾದ ವಾಲ್ಟರ್ ನಂದಳಿಕೆ, ದಾಯ್ಜಿವಲ್ಡ್ ದೂರದರ್ಶನದ ವಾಣಿಜ್ಯ ವಿಭಾಗದ ನಿರ್ದೇಶಕ ಅಲೆಕ್ಸಿಸ್ ಕ್ಯಾಸ್ಟೆಲಿನೋ, ಕಾಮಿಡಿ ರಾಜೆ-ರಾಣಿ ಕಾರ್ಯಕ್ರಮದ ತೀರ್ಪುಗಾರ ಆರ್ಜೆ ಅರ್ಪಿತ್, ಕಾರ್ಯಕ್ರಮದ ನಿರೂಪಕ ಸಿಕೆ ಪ್ರಶಾಂತ್, ನಿರೂಪಕಿ ಶರ್ಮಿಳಾ ಉಪಸ್ಥಿತರಿದ್ದರು.
ಕಾಮಿಡಿ ರಾಜೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹರ್ಷಿತ್, ಇದು ನನ್ನ ಜೀವನದಲ್ಲಿ ಅವಿಸ್ಮರಣಿಯ ದಿನವಾಗಿದೆ. ಕಾಮಿಡಿ ರಾಜೆ-ರಾಣಿ ವೇದಿಕೆಯು ನನಗೆ ಅನನೇಕ ಹೊಸ ವಿಷಯಗಳನ್ನು ಕಲಿಸಿದೆ. ಈ ಶೋಗೆ ಆಯ್ಕೆಯಾದ ನಂತರ ನನ್ನನ್ನು ನಾನು ಗುರುತಿಸಿಕೊಂಡಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಫೈನಲಿಸ್ಟ್ ಮತ್ತು ವಿಜೇತರಾದವರಿಗೆ ಶುಭ ಹಾರೈಸಿ ಮಾತನಾಡಿದ ವಾಲ್ಟರ್ ನಂದಳಿಕೆ, ಸ್ಟ್ಯಾಂಡಪ್ ಕಾಮಿಡಿ ತುಳು ಮನರಂಜನಾ ಜಗತ್ತಿಗೆ ಹೊಸ ವಿಷಯ. ಕಾರ್ಯಕ್ರಮದ ತೀರ್ಪುಗಾರ ಆರ್.ಜೆ. ಅರ್ಪಿತ್ ಅವರು ತುಳುವಿನಲ್ಲಿ ಸ್ಟ್ಯಾಂಡ್ಅಪ್ ಕಾಮಿಡಿಯನ್ನು ಪರಿಚಯಿಸಿದ ಪ್ರಮುಖರಲ್ಲಿ ಒಬ್ಬರು. ನಾವು ಈ ಕಾರ್ಯಕ್ರಮವು ಇಷ್ಟು ಯಶಸ್ವಿ ಆಗುತ್ತದೆ ಎಂದು ಅಂದುಕೊಂಡಿರಲಿಲ್ಲ, ಆದರೆ ವೀಕ್ಷಕರು ಇಷ್ಟಪಟ್ಟು ಈ ಕಾರ್ಯಕ್ರಮವು ಕರಾವಳಿ ಕರ್ನಾಟಕದ ಅತ್ಯಂತ ಜನಪ್ರಿಯ ಹಾಸ್ಯ ಕಾರ್ಯಕ್ರಮಗಳಲ್ಲಿ ಒಂದಾಯಿತು. ಮುಂದಿನ ದಿನಗಳಲ್ಲಿ ಕಾಮಿಡಿ ರಾಜೆ/ ರಾಣಿ ಎರಡನೇ ಸೀಸನ್ ಅನ್ನು ಪ್ರಾರಂಭಿಸುತ್ತೇವೆ ಎಂದು ತಿಳಿಸಿದ್ದಾರೆ.
ಸುಪ್ತ ಪ್ರತಿಭೆಗಳಿಗೆ ಮುಕ್ತ ವೇದಿಕೆಯನ್ನು ಕಲ್ಪಿಸಿ ಕೊಟ್ಟ ಈ ವೇದಿಕೆಗೆ ಆರಂಭದಲ್ಲಿ 250 ಕ್ಕೂ ಹೆಚ್ಚು ಸ್ಪರ್ಧಿಗಳು ಆಡಿಷನ್ ಕೊಟ್ಟಿದ್ದು ಅದರಲ್ಲಿ 30 ಮೊದಲ ಸುತ್ತಿಗೆ ಆಯ್ಕೆ ಮಾಡಲಾಗಿತ್ತು. ಹಲವಾರು ಸುತ್ತಿನ ಬಳಿಕ ಫೈನಲ್ ಹಂತಕ್ಕೆ 5 ಪ್ರತಿಭಾನ್ವಿತ ಕಲಾವಿದರಾದ ಹರ್ಷಿತ್ ಶೆಟ್ಟಿ ಕೌಡೂರು ಗುತ್ತು, ಸಂದೇಶ್ ಬೊಳ್ಳೂರು, ಪ್ರಜ್ವಲ್ ಭಂಡಾರಿ,ಸಂದೀಪ್ ಆಚಾರ್ಯ, ದಿನೇಶ್ ಕುಂಪಲ ಆಯ್ಕೆ ಆಗಿದ್ದರು.
ಈ ಕಾರ್ಯಕ್ರಮದ ತೀರ್ಪುಗಾರರಾಗಿ 'mad in kudla' ಖ್ಯಾತಿಯ ಅರ್ಪಿತ್ ಇಂದ್ರವರ್ಧನ್ ಅವರು ತಮ್ಮ ನಗುವಿನ ಮೂಲಕ ಮೆರುಗನ್ನು ಹೆಚ್ಚಿಸಿದ್ದಾರೆ.ಅದೇ ರೀತಿ ಈ ಕಾರ್ಯಕ್ರಮದಲ್ಲಿ ತುಳುನಾಡಿನ ಹಾಸ್ಯ ದಿಗ್ಗಜ ಪ್ರಶಾಂತ್.ಸಿ ಕೆ ಇವರು ಬಗೆ ಬಗೆಯ ಪಾತ್ರದ ಮೂಲಕ ಈ ಕಾರ್ಯಕ್ರಮದಲ್ಲಿ ಮಿಂಚಿದ್ದಾರೆ.