ಉಡುಪಿ, ಮೇ 01 (DaijiworldNews/HR): ಆದಿ ಉಡುಪಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಉತ್ತರಪತ್ರಿಕೆಯ ಮೌಲ್ಯಮಾಪನ ಕೇಂದ್ರದ ಗಾರ್ಡ್ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಎಹೆಚ್. ಸಿ 104 ನೇ ರಾಜೇಶ್ ಕುಂದರ್ ರವರ ಎಪ್ರಿಲ್ 28 ರಂದು ಸಂಶಾಯಸ್ಪದ ಆತ್ಮಹತ್ಯೆ ಪ್ರಕರಣಕ್ಕೆ ಡೆತ್ ನೋಟ್ ಸಿಕ್ಕಿರುವುದರಿಂದ ದೊಡ್ಡ ತಿರುವು ಸಿಕ್ಕಿದೆ.
ಮೊದಲು ಈ ಬಗ್ಗೆ ರಾಜೇಶ್ ಕುಂದರ್ ಕರ್ತವ್ಯದಲ್ಲಿರುವಾಗ ಅವರ ಬಳಿಯಿದ್ದ ರೈಫಲ್ನಿಂದ ಆಕಸ್ಮಿಕವಾಗಿ ಗುಂಡು ಸಿಡಿದು ಮೃತಪಟ್ಟಿರುವುದಾಗಿ ಅವರ ಜೊತೆ ಕರ್ತವ್ಯದಲ್ಲಿದ್ದ ಜಿಲ್ಲಾ ಪೊಲೀಸ್ ಸಶಸ್ತ್ರ ಪಡೆ (ಡಿ.ಎ.ಆರ್) ಗಣೇಶ್ ಹೇಳಿಕೆ ನೀಡಿರುವ ಪ್ರಕಾರ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಂಬ್ರ: 25/2022 ಕಲಂ: 174 ಸಿಅರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಈ ಹಿಂದೆಯೂ ಉಡುಪಿಯ ಬೇರೆ ಪೋಲಿಸ್ ಠಾಣೆಯಲ್ಲಿ ರೈಫಲ್ನಿಂದ ಆಕಸ್ಮಿಕವಾಗಿ ಗುಂಡು ಸಿಡಿದು ಮೃತಪಟ್ಟಿರುವ ಘಟನೆ ನಡೆದಿತ್ತು. ಆದರೆ ರಾಜೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಕೆ ಸರಿಯಾದ ದಾಖಲೆಗಳು ಸಿಕ್ಕಿರಲಿಲ್ಲ.
ಡೆತ್ ನೋಟ್ ಪತ್ತೆ: ಮೂವರು ಆರೋಪಿತರ ಹೆಸರು ಉಲ್ಲೇಖ
ತನಿಖೆ ಮುಗಿದ ಬಳಿಕ ಹೇಳಿಕೆ ನೀಡಿರುವ ಗಣೇಶ್ ಆದಿ ಉಡುಪಿ ಶಾಲೆಯಲ್ಲಿದ್ದ ತನ್ನ ಬಟ್ಟೆಬರೆ ಇದ್ದ ಬ್ಯಾಗ್ ಮತ್ತು ರೈಫಲ್ ನ್ನು ತೆಗೆದುಕೊಂಡು ಡಿಎಆರ್ ಕೇಂದ್ರ ಸ್ಥಾನಕ್ಕೆ ಹೋಗಿ ಬ್ಯಾಗ್ ನ್ನು ಕಿಟ್ ಬಾಕ್ಸ್ ನಲ್ಲಿ ಇರಿಸಿ, ರೈಫಲ್ ನ್ನು ಆರ್ಮರ್ ರವರಲ್ಲಿ ಡೆಪಾಸಿಟ್ ಮಾಡಿ ವಿಶ್ರಾಂತಿಗೆ ಹೋಗಿರುತ್ತಾರೆ. ಎಪ್ರಿಲ್ 30 ಬೆಳಿಗ್ಗೆ 09:30 ಗಂಟೆಗೆ ಡಿಎಆರ್ ಹೆಡ್ ಕ್ವಾರ್ಟಸ್ ಗೆ ಕರ್ತವ್ಯಕ್ಕೆ ಬಂದು ಕಿಟ್ ಬಾಕ್ಸ್ ನಲ್ಲಿದ್ದ ಬ್ಯಾಗ್ನಿಂದ ಸಮವಸ್ತ್ರ ಮತ್ತು ಬೆಟ್ ಶೀಟ್ ನ್ನು ಹೊರತೆಗೆದಾಗ, ಬೆಡ್ ಶೀಟ್ ನ ಅಡಿಯಿಂದ ನೋಟ್ ಬುಕ್ ನ ಒಂದು ಹಾಳೆ ಬಿದ್ದಿದ್ದು, ಅದನ್ನು ನೋಡಲಾಗಿ, ಅದರ ಕೊನೆಯಲ್ಲಿ ಎಹೆಚ್ಸಿ 104 ಎಂದು ಬರೆದು ಸಹಿ ಮಾಡಿದ್ದು, ಅದರಲ್ಲಿ ಮೃತರು ತನ್ನ ಸಾವಿಗೆ ಆರೋಪಿತರು ಕಾರಣ ಎಂಬುದಾಗಿ ಬರೆದಿದ್ದು, ಈ ಮಾಹಿತಿಯನ್ನು ಪೊಲೀಸ್ ಮೇಲಾಧಿಕಾರಿಗಳಿಗೆ ತಿಳಿಸಿ ಡೆತ್ ನೋಟ್ ನ್ನು ಠಾಣೆಗೆ ಹಾಜರುಪಡಿಸಿ ಗಣೇಶ್ ನೀಡಿದ್ದಾರೆ.
ಒಂದು ತಿಂಗಳ ಹಿಂದೆ ಗಂಗೊಳ್ಳಿ ಪೋಲಿಸ್ ಠಾಣೆಯಲ್ಲಿ ಪೋಲಿಸರ ನಡುವೆ ನಡೆದ ಗಲಾಟೆ ವಿಚಾರವಾಗಿ ಒಂದು ತಿಂಗಳು ಕಾಲ ಅಮಾನತುನಲ್ಲಿದ್ದ ರಾಜೇಶ್, ಮೊನ್ನೆ ಗುರುವಾರದಂದು ಪುನಃ ಕರ್ತವ್ಯಕ್ಕೆ ಹಾಜರಾಗಿದ್ದರು. ಅಮಾನತಿನಿಂದ ಮಾನಸಿಕವಾಗಿ ಕುಗ್ಗಿದ್ದರು ಎಂದು ಹೇಳಲಾಗಿತ್ತು. ಆದರೆ ಈಗ ಡೆತ್ ನೋಟ್ ನಿಂದ ಆತ್ಮಹತ್ಯೆಗೆ ಪ್ರಚೋದನೆ ನೀಡಲಾಗಿದೆಯೇ ಎಂಬ ಸಂಶಯ ವ್ಯಕ್ತವಾಗಿದೆ.
ಇದೀಗ ಪ್ರಕರಣಕ್ಕೆ ಸಂಬಂಧಿಸಿ ರಾಜೇಶ್ ಕುಂದರ್ ಅವರು ಬರೆದಿರುವ ಡೆತ್ ನೋಟ್ ಲಭ್ಯವಾಗಿದ್ದು, ಡೆತ್ ನೋಟ್ ನಲ್ಲಿ ಡಿಎಆರ್ ಎಸಿಪಿ ಉಮೇಶ್, ಅಸ್ಪಕ್ ಹಾಗೂ ಗಂಗೊಳ್ಳಿ ಠಾಣಾ ಪಿಎಸ್ಐ ನಂಜ ನಾಯ್ಕ ಹಾಗೂ ಇನ್ನೋರ್ವ ವ್ಯಕ್ತಿ ತನ್ನ ಸಾವಿಗೆ ಕಾರಣ ಎಂದು ಉಲ್ಲೇಖಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪದ ಮೇಲೆ ಈ ಮೂವರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಮೂರು ಆರೋಪಿಗಳ ಸಹಿತ ನಾಲ್ಕನೇ ಆರೋಪಿ ಇರುವುದಾಗಿ ಡೆತ್ ನೋಟ್ ನಲ್ಲಿ ಬರೆದಿದ್ದು, ಆತ್ಮಹತ್ಯೆಗೆ ಪ್ರಚೋದನೆ ಮಾಡಿದ ಆ ವ್ಯಕ್ತಿ ಯಾರು ಎಂಬ ಪ್ರಶ್ನೆ ಮೂಡಿದೆ.
ಡೆತ್ ನೋಟ್ ಬಗ್ಗೆ ಕೆಲವು ಸಂಶಯ ಇರುವುದರಿಂದ ಕೈ ಬರಹ ತಜ್ಞರ ಪರಿಶೀಲನೆ ಗಾಗಿ ಕಳುಹಿಸಿಕೊಡಲಾಗಿದ್ದು, ವರದಿ ಬಂದ ಮೇಲೆ ಈ ಸಂಶಯಾಸ್ಪದ ಆತ್ಮಹತ್ಯೆ ಹಿಂದಿರುವ ನಿಜಾಂಶ ತಿಳಿಯುತ್ತದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಆತ್ಮಹತ್ಯೆಗೆ ಪ್ರಚೋದನೆ ಮತ್ತು ಯುಡಿಆರ್ ನಂತೆ ಅಪರಾದ ಕ್ರಮಾಂಕ 65/2022ಕಲಂ: 306 Rw 34 IPC ಯಂತೆ ಪ್ರಕರಣ ದಾಖಲಿಸಲಾಗಿದೆ.