ಉಡುಪಿ, ಮೇ 01 (DaijiworldNews/DB): ಮಲ್ಪೆ ಸೈಂಟ್ ಮೇರೀಸ್ ದ್ವೀಪದಲ್ಲಿ ಜೀವಹಾನಿಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಾಸಕ ಕೆ. ರಘುಪತಿ ಭಟ್ ಹೇಳಿದ್ದಾರೆ.
ಈ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಐವರು ಪ್ರವಾಸಿಗರು ಮೃತಪಟ್ಟ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳುವ ಸಲುವಾಗಿ ಜಿಲ್ಲಾಧಿಕಾರಿ ಎಂ. ಕೂರ್ಮಾ ರಾವ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಮಲ್ಪೆ ಟೂರಿಸ್ಟ್ ಬೋಟ್ ಮಾಲಕರು ಮತ್ತು ಬೀಚ್ ನಿರ್ವಾಹಕರೊಂದಿಗಿನ ಸಭೆಯಲ್ಲಿ ಅವರು ಮಾತನಾಡಿದರು.
ಮುಂದಿನ ದಿನಗಳಲ್ಲಿ ಯಾವುದೇ ಅವಘಡ ಇಲ್ಲಿ ಸಂಭವಿಸಬಾರದು. ಅದಕ್ಕಾಗಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಪ್ರವಾಸಿಗರು ನೀರಿಗಿಳಿಯದಂತೆ ತಡೆಯಲು ಧಾರಕ ಬೇಲಿಗಳ ಅಳವಡಿಕೆ ಅಗತ್ಯತೆ ಕಾಣುತ್ತಿದೆ. ಅಪಾಯವಿರುವ ಸ್ಥಳಗಳಲ್ಲಿ ಎಚ್ಚರಿಕೆ ಫಲಕಗಳನ್ನು ಅಳವಡಿಸಬೇಕು. ಪ್ರವಾಸಿಗರು ಫೋಟೋ ಕ್ಲಿಕ್ಕಿಸಲು ನೀರಿಗಿಳಿಯುವುದನ್ನು ತಡೆಯಲು ಸುರಕ್ಷಿತ ಸೆಲ್ಫೀ ಸ್ಥಳಗಳನ್ನು ಗುರುತಿಸಿ ಅಲ್ಲಿ ಮಾತ್ರ ಫೋಟೋ ತೆಗೆಯಲು ಅವಕಾಶ ಕಲ್ಪಿಸಬೇಕು ಎಂಬ ಆಗ್ರಹಗಳು ಕೇಳಿ ಬಂತು. ಅಲ್ಲದೆ, ಪ್ರವಾಸಿ ಗೈಡ್ಗಳನ್ನು ನೇಮಕ ಮಾಡುವುದರೊಂದಿಗೆ ರಕ್ಷಣಾ ಸಿಬಂದಿಯ ಸಂಖ್ಯೆಯನ್ನು ಹೆಚ್ಚು ಮಾಡಬೇಕೆಂಬ ಒತ್ತಾಯವನ್ನು ಸಭೆಯಲ್ಲಿ ಸಲ್ಲಿಸಲಾಯಿತು.
ಅಪರ ಜಿಲ್ಲಾಧಿಕಾರಿ ವೀಣಾ, ನಗರಸಭೆ ಎಇಇ ಯಶವಂತ್ ಮೊದಲಾದವರು ಉಪಸ್ಥಿತರಿದ್ದರು.