Karavali
ಕುಂದಾಪುರ: ಪುರಸಭಾ ವ್ಯಾಪ್ತಿಯ ಸರ್ವೀಸ್ ರಸ್ತೆಯ ಏಕಮುಖ ಸಂಚಾರ ಗೊಂದಲ ಬಗೆಹರಿಸಲು ಸದಸ್ಯರ ಆಗ್ರಹ
- Sat, Apr 30 2022 06:54:21 PM
-
ಕುಂದಾಪುರ, ಏ 30 (DaijiworldNews/MS): ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ ಸರ್ವೀಸ್ ರಸ್ತೆಯಲ್ಲಿ ಏಕಮುಖ ಸಂಚಾರದ ಬಗ್ಗೆ ಗೊಂದಲ ಏರ್ಪಟ್ಟಿದ್ದು, ಈ ಬಗ್ಗೆ ಡಿವೈಎಸ್ಪಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಸಿ ಈ ಬಗ್ಗೆ ನಿರ್ಣಯ ಕೈಗೊಳ್ಳಬೇಕು ಎನ್ನುವ ಆಗ್ರಹ ಕುಂದಾಪುರ ಪುರಸಭಾ ಸದಸ್ಯರಿಂದ ಕೇಳಿಬಂತು.
ಎ.30ರಂದು ಪುರಸಭೆಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾವಿಸಿದ ಸದಸ್ಯ ಚಂದ್ರಶೇಖರ ಖಾರ್ವಿ ಇತ್ತೀಚೆಗೆ ಡಿವೈಎಸ್ಪಿ ಅವರು ಅಪಘಾತ ನಿಯಂತ್ರಿಸುವಲ್ಲಿ ಏಕಮುಖ ಸಂಚಾರ ಆರಂಭಿಸುವ ಬಗ್ಗೆ ಪತ್ರಿಕೆಯೊಂದರಲ್ಲಿ ಹೇಳಿಕೆ ನೀಡಿ ಪುರಸಭೆಗೂ ಇದಕ್ಕೂ ಸಂಬಂಧ ಇರುವುದಿಲ್ಲ ಎನ್ನುವ ತಿಳಿಸಿದ್ದು ಪುರಸಭೆಯ ಹಕ್ಕುಚ್ಯುತಿಯಾಗಿದೆ. ಪುರಸಭಾ ವ್ಯಾಪ್ತಿಯಲ್ಲಿ ಒಂದು ನಿರ್ಣಯ ತಗೆದುಕೊಳ್ಳುವಾಗ ಸ್ಥಳೀಯಾಡಳಿತದ ನಿರ್ಣಯದ ಅವಶ್ಯಕತೆ ಇರುವುದಿಲ್ಲವೇ? ಎಂದು ಪ್ರಶ್ನಿಸಿದರು.ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಅವರು, ಕುಂದಾಪುರ ಮೇಲ್ಸೇತುವೆ ಆರಂಭವಾಗುವ ಮೊದಲು ಕೆಲವೆಡೆ ಏಕಮುಖ ಸಂಚಾರಕ್ಕೆ ತಾತ್ಕಾಲಿಕ ಆದೇಶ ನೀಡಲಾಗಿತ್ತು. ಆದರೆ ಕೆಲವೊಂದು ನಿಯಮ ಮಾತ್ರ ಪಾಲಿಸಲಾಗುತ್ತಿದೆ. ನಿಯಮಗಳನ್ನು ರೂಪಿಸುವಾಗ ಸ್ಥಳೀಯಾಡಳಿತದ ಗಮನಕ್ಕೆ ತಂದು ಅಧಿಸೂಚನೆ ಹೊರಡಿಸುವುದು ಸೂಕ್ತ ಎಂದರು.
ಚಂದ್ರಶೇಖರ ಖಾರ್ವಿ ಮುಂದುವರಿಸಿ ಸರ್ವೀಸ್ ರಸ್ತೆಯಲ್ಲಿ ಏಕಮುಖ ಸಂಚಾರ ನಿಯಮ ರೂಪಿಸಿದರೆ ದ್ವಿಚಕ್ರ ವಾಹನ ಹಾಗೂ ರಿಕ್ಷಾಗಳಿಗೆ ಸಮಸ್ಯೆಯಾಗುತ್ತದೆ. ಈ ಬಗ್ಗೆ ಗಮನ ಹರಿಸಬೇಕು. ಹಾಗೂ 2019ರ ತಾತ್ಕಾಲಿಕ ಆದೇಶ. ಈಗ ಉರ್ಜಿತದಲ್ಲಿ ಇಲ್ಲ. ಇದರ ಬಗ್ಗೆ ಚರ್ಚಿಸಲು, ಜನಹಿತಾಸಕ್ತಿಯ ಬಗ್ಗೆ ಮಾತನಾಡಲು ಪುರಸಭೆಗೂ ಹಕ್ಕಿದೆ ಎಂದರು.
ಇದಕ್ಕೆ ಧ್ವನಿಗೂಡಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ ಜಿ.ಕೆ ಪಾರ್ಕಿಂಗ್ ವ್ಯವಸ್ಥೆ ಹಾಗೂ ಏಕಮುಖ ಸಂಚಾರದ ವ್ಯವಸ್ಥೆಯ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಬೇಕು. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕವೇ ಆದೇಶ ನೀಡಬೇಕು ಎಂದರು. ನಾಮನಿರ್ದೇಶಿತ ಸದಸ್ಯ ರತ್ನಾಕರ ಕುಂದಾಪುರ, ಪ್ರಭಾಕರ ದ್ವನಿಗೂಡಿಸಿದರು. ಉತ್ತರಿಸಿ ಮಾತನಾಡಿದ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್, ಈ ಬಗ್ಗೆ ಡಿವೈಎಸ್ಪಿ ಸಹಿತ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಸಿ ವಿಷಯದ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಕುಂದಾಪುರ ಆಟೋರಿಕ್ಷಾದವರ ಬೇಡಿಕೆಯ ಬಗ್ಗೆ ಸಭೆ ನಡೆಸಿ ಎಂದು ಸದಸ್ಯರು ಆಗ್ರಹಿಸಿದರು.ಯುಜಿಡಿ ವೆಟ್ವೆಲ್ಗೆ ಜಾಗ ಖರೀಧಿಯ ದರ ನಿಗಧಿ ವಿಚಾರ ಲೋಕಾಯುಕ್ತ ತನಿಖೆಯಲ್ಲಿರುವಾಗಲೇ ಮತ್ತೆ 5 ಸೆಂಟ್ಸ್ , 1 ಸೆಂಟ್ಸ್ ಜಾಗ ಖರೀದಿಗೆ ಮುಂದಾಗಿರುವುದು ಏಕೆ? 26 ಸೆಂಟ್ಸ್ ಜಾಗದ ದರಪಟ್ಟಿಯ ವಿಚಾರದಲ್ಲಿಯೇ ಅಸಮಾಧಾನವಾಗಿ ಈಗ ತನಿಖೆ ನಡೆಯುತ್ತಿದೆ. ಈ ನಡುವೆ ಮತ್ತೆ ಅಲ್ಲಿಯೇ ಜಾಗ ಖರೀಧಿಯ ಬಗ್ಗೆ ಆತುರ ಏಕೆ ಎಂದು ಸದಸ್ಯೆ ದೇವಕಿ ಸಣ್ಣಯ್ಯ ಪ್ರಶ್ನಿಸಿದರು.
ಸದಸ್ಯ ಪ್ರಭಾಕರ ಇದಕ್ಕೆ ಪ್ರತಿಕ್ರಿಯಿಸಿ 5 ಸೆಂಟ್ಸ್ ಮತ್ತು 1 ಸೆಂಟ್ಸ್ ಜಾಗ ಖರೀಧಿಗೆ ವಿರೋಧ ವ್ಯಕ್ತಪಡಿಸಿಲ್ಲ. ಯುಜಿಡಿ ಕಾಮಗಾರಿ ನಡೆಯಬೇಕಿದೆ ಎಂದರು. ರಾಘವೇಂದ್ರ ಖಾರ್ವಿ ಇದಕ್ಕೆ ಧ್ವನಿಗೂಡಿಸಿದರು. ಸದಸ್ಯ ಶ್ರೀಧರ ಶೇರೆಗಾರ್ ಮಾತನಾಡಿ ಸ್ಥಳ ಖರೀಧಿಗೆ ವಿರೋಧ ಮಾಡಿಲ್ಲ, ಹಿಂದಿನ ದರಪಟ್ಟಿಯಲ್ಲಿಯೇ ಇದೆ. ಕಾನೂನು ವ್ಯಾಪ್ತಿಯಲ್ಲಿ ನಡೆಯಲಿ .ಯುಜಿಡಿ ಕಾಮಗಾರಿ ಇನ್ನೂ ಕೆಲವೆಡೆ ಪೈಪ್ ಅಳವಡಿಕೆ ಸಮರ್ಪಕವಾಗಿಲ. ಆ ಬಗ್ಗೆ ಜನ ದಂಗೆ ಏಳುತ್ತಾರೆ ಎಂದರು. ನಿತ್ಯಾನಂದ ಕೆ.ಜಿ ಇದಕ್ಕೆ ಧ್ವನಿಗೂಡಿಸಿದರು. ಗಿರೀಶ ಜಿ.ಕೆ ಮಾತನಾಡಿ, ಈ ಹಿಂದೆ ನಾನು ದೂರು ನೀಡಿದಂತೆ ಲೋಕಾಯುಕ್ತ ತನಿಖೆ ನಡೆಯುತ್ತಿದೆ. ಸ್ಥಳದ ಬಗ್ಗೆ ಆಕ್ಷೇಪ ಮಾಡಿಲ್ಲ, ಸದಸ್ಯರು ಸಭೆಗೆ ತಪ್ಪು ಮಾಹಿತಿ ನೀಡಬೇಡಿ, ಬೇಕಿದ್ದರೆ ನಾನು ನೀಡಿದ ದೂರಿನ ಪ್ರತಿ ತಗೆದು ನೋಡಿ ಎಂದು ಸವಾಲು ಹಾಕಿದರು.
ಸದಸ್ಯ ಪ್ರಭಾಕರ ಮಾತನಾಡಿ ಕುಂದಾಪುರದಲ್ಲಿ ಆಟೋ ನಿಲ್ದಾಣಕ್ಕೆ ಅಧಿಕೃತ ಸ್ಥಳವಿಲ್ಲ ಎಂದು ಪುರಸಭೆಗೆ ಮುತ್ತಿಗೆ ಹಾಕಿ ಮನವಿ ಸಲ್ಲಿಸಿದ್ದಾರೆ. ಅವರಿಗೆ ಸೂಕ್ತ ಜಾಗ ಗುರುತಿಸುವಂತೆ ಆರ್.ಟಿ.ಓ ಹಾಗೂ ತಹಶೀಲ್ದಾರರ ಮನವರಿಕೆ ಮಾಡಬೇಕಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಚಂದ್ರಶೇಖರ ಖಾರ್ವಿ, ಪುರಸಭಾ ವ್ಯಾಪ್ತಿಯಲ್ಲಿ ಆಟೋರಿಕ್ಷಾದವರಿಗೆ ಸೂಕ್ತ ಸ್ಥಳವಿಲ್ಲ. ಸರಿಯಾದ ಸ್ಥಳವೂ ಪುರಸಭಾ ವ್ಯಾಪ್ತಿಯಲ್ಲಿ ಇಲ್ಲ, ನಿಲ್ದಾಣದ ಸ್ಥಳವನ್ನು ಇದಕ್ಕೆ ಸಂಬಂಧಿಸಿದ ಇಲಾಖೆ ಮಾಡಬೇಕು. ನಿಲ್ದಾಣಕ್ಕೆ ಜಾಗವನ್ನು ಗುರುತು ಮಾಡಿಕೊಟ್ಟರೆ ಅದಕ್ಕೆ ಮೂಲ ಸೌಕರ್ಯವನ್ನು ಒದಗಿಸುವ ಜವಬ್ದಾರಿ ಪುರಸಭೆಯ ಕರ್ತವ್ಯ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯೊಂದಿಗೆ ಸಭೆ ನಡೆಸಿ ಕೂಡಲೇ ತೀರ್ಮಾನ ತಗೆದುಕೊಳ್ಳಬೇಕು ಎಂದರು.
ಗಿರೀಶ್ ಜಿ.ಕೆ ಮಾತನಾಡಿ ಆಟೋರಿಕ್ಷಾದವರ ಪರವಾಗಿ ನಾವು ಕೂಡಾ ಅಧಿಕಾರಿಗಳಿಗೆ ಮನವಿ ಮಾಡೋಣ ಎಂದರು. ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಮಾತನಾಡಿ, ಪುರಸಭಾ ವ್ಯಾಪ್ತಿಯಲ್ಲಿ 24-25 ಕಡೆಗಳಲ್ಲಿ ಚದುರಿದಂತೆ ರಿಕ್ಷಾ ನಿಲ್ದಾಣಗಳಿವೆ. ಅವರು ಇರುವಲ್ಲಿಯೇ ನಿಲ್ದಾಣ ಮಾಡಿಕೊಡುವಂತೆ ಮಾನವಿ ಮಾಡಿದ್ದಾರೆ. ಸ್ಥಳದ ಬಗ್ಗೆ ಕಂದಾಯ ಇಲಾಖೆಯಿಂದ ಮಾಹಿತಿ ಪಡೆದು ಆರ್.ಟಿ.ಓ ಮಾಹಿತಿ ನೀಡಬೇಕಾಗುತ್ತದೆ ಎಂದರು.ಕಾಂಡ್ಲಾವನದ ಬಗ್ಗೆ ಇಲಾಖೆಯಿಂದ ಮಾಹಿತಿ ಕೇಳಿದ್ದು ಮಾಹಿತಿ ಅಸಮರ್ಪಕವಾಗಿದೆ ಎಂದು ಚಂದ್ರಶೇಖರ್ ಖಾರ್ವಿ ದೂರಿದರು. ಪೌರಕಾರ್ಮಿಕರ 12 ಮನೆಗಳು ಅಪೂರ್ಣವಾಗಿದ್ದು ಹಿಂದುಳಿದ ವರ್ಗಗಳ ಅಭವೃದ್ದಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮನವಿ ಸಲ್ಲಿಸಿದ್ದು, ಅವರು ತಮ್ಮ ಇಲಾಖೆಯಿಂದ 12 ಲಕ್ಷ ಮರುಪಾವತಿಯ ನೆಲೆಯಲ್ಲಿ ಪಾವತಿಸಿದ್ದಾರೆ ಎಂದರು.
ಸದಸ್ಯ ಅಬುಮಹಮ್ಮದ್ ಮಾತನಾಡಿ, ಪೇರಿ ಪಾರ್ಕ್ನಲ್ಲಿ ದೀಪ ಸರಿಯಾಗಿಲ್ಲ. ಆಟಿಕೆಗಳು ಹಾಳಾಗಿದ್ದು ಅವುಗಳನ್ನು ಸ್ಥಳಾಂತರಿಸಬೇಕು. ಪೇರಿ ಉದ್ಯಾವನವನ್ನು ವ್ಯವಸ್ಥಿತಗೊಳಿಸಬೇಕು. ಎಂದರು. ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿಗಳು ಈಗಾಗಲೇ ಪಾರ್ಕ್ನಲ್ಲಿ ಮಿನಿ ಹೈಮಾಸ್ಕ್ ದೀಪ ಟೈಮರ್ನೊಂದಿಗೆ ಅಳವಡಿಸಲು ಅಧ್ಯಕ್ಷರು ಅನುಮೋದನೆ ನೀಡಿದ್ದಾರೆ ಎಂದರು.
ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಂದೀಪ ಖಾರ್ವಿ, ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಜಿ.ಕೆ., ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.