ಕುಂದಾಪುರ, ಏ 30 (DaijiworldNews/HR): ಮೀನಿನ ಸಂತತಿ ಉಳಿಯಲು, ಹೆಚ್ಚುತ್ತಿರುವ ಜೆಲ್ಲಿ ಫಿಶ್ಗಳ ನಾಶಕ್ಕೆ ಕಡಲಾಮೆಗಳ ರಕ್ಷಣೆ ಅತೀ ಅಗತ್ಯವಾಗಿ ಆಗಬೇಕಿದೆ. ಬೀಚ್ಗಳಲ್ಲಿ ಪ್ಲಾಸ್ಟಿಕ್, ತ್ಯಾಜ್ಯ ರಾಶಿ ಹೆಚ್ಚುತ್ತಿರುವುದರಿಂದ ಕಡಲಾಮೆಗಳಿಗೆ ಮಾರಕವಾಗಿದೆ. ಆದ್ದರಿಂದ ಸರಕಾರ, ಅರಣ್ಯ ಇಲಾಖೆ, ಸಂಘ-ಸಂಸ್ಥೆಗಳಿಗಿಂತಲೂ ಕಡಲಿನಲ್ಲೇ ಹೆಚ್ಚು ಕಾಲ ಕಳೆಯುವ ಮೀನುಗಾರರೇ ಕಡಲಾಮೆಗಳ ರಕ್ಷಣೆಯ ಮುಖ್ಯ ರಾಯಭಾರಿಗಳಾಗಬೇಕು ಎಂದು ಮೈಸೂರು ಸಂಸ್ಥಾನದ ಯಧುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಶನಿವಾರ ಕೋಡಿಯ ಕಡಲ ಕಿನಾರೆಯಲ್ಲಿ ಅರಣ್ಯ ಇಲಾಖೆ, ಕ್ಲೀನ್ ಕುಂದಾಪುರ ಪ್ರಾಜೆಕ್ಟ್, ಎಫ್ಎಸ್ಎಲ್ ಇಂಡಿಯಾ ಆಶ್ರಯ ಹಾಗೂ ಹಾಗೂ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಆಯೋಜಿಸಿದ ಆಮೆ ಹಬ್ಬ, ಬೀಚ್ ಸ್ವಚ್ಛತೆ, ಕಡಲಾಮೆ ಜಾಗೃತಿ, ಮರಳು ಶಿಲ್ಪ, ಗಾಳಿಪಟ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವರ್ಷದ ಹಿಂದೆ ಕೋಡಿ ಬೀಚ್ ಸ್ವಚ್ಛತೆ ಹಾಗೂ ಆಮೆ ಮೊಟ್ಟೆ ರಕ್ಷಣೆ ಕುರಿತು ಕ್ಲೀನ್ ಕುಂದಾಪುರ ಪ್ರಾಜೆಕ್ಟ್ನವರು ಜಾಲತಾಣದಲ್ಲಿ ಹಂಚಿಕೊಂಡ ವಿಷಯಕ್ಕೆ ನಾನು ಶುಭಹಾರೈಸಿದ್ದೆ. ಅಂದಿನಿಂದ ನನಗೂ ಈ ಬಗ್ಗೆ ಕುತೂಹಲ ಮೂಡಿತು. ನಮ್ಮೂರಲ್ಲಿ ವನ್ಯಜೀವಿ, ಕಾಡಿನ ರಕ್ಷಣೆ ಅಗತ್ಯವಾಗಿದ್ದರೆ, ಕರಾವಳಿಯಲ್ಲಿ ಮೀನಿನ ಸಂತತಿ, ಆಮೆ, ಸ್ವಚ್ಛ ಬೀಚ್ನ ಅಗತ್ಯತೆ ಬಹಳಷ್ಟಿದೆ. ಆ ದಿಸೆಯಲ್ಲಿ ನಾವೆಲ್ಲರೂ ಕೈಜೋಡಿಸಬೇಕಾಗಿದೆ. ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣಕ್ಕೆ ನಮ್ಮ ದೇಗುಲಗಳೇ ನಾಂದಿಯಾಗಲಿ ಎಂದವರು ಸಲಹೆ ನೀಡಿದರು.
ಮಂಗಳೂರಿನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ಎಸ್. ನಟಲ್ಕರ್ ಮಾತನಾಡಿ, ಅತಿಯಾದ ಪರಿಸರ ನಾಶ, ತ್ಯಾಜ್ಯ ರಾಶಿಯಿಂದಾಗಿ ಎಲ್ಲೆಡೆ ಮಾಲಿನ್ಯ ಹೆಚ್ಚುತ್ತಿದ್ದು, ಕಡಲ ಕಿನಾರೆಗಳು ಸಹ ಇದರಿಂದ ಹೊರತಲ್ಲ. ಬೀಚ್ ಸ್ವಚ್ಛತೆ, ಕಡಲಾಮೆ ರಕ್ಷಣೆಯಲ್ಲಿ ಇಲಾಖೆ, ಸಂಘಟನೆಗಳ ಜತೆಗೆ ಸ್ಥಳೀಯ ಜನರ ಸಹಭಾಗಿತ್ವವಿದ್ದರೆ ಮಾತ್ರ, ಸರಕಾರದ ಯೋಜನೆ ಯಶನ್ವಿಯಾಗಿ ಕಾರ್ಯಗತಗೊಳ್ಳುತ್ತದೆ ಎಂದರು.
ನಟ ಶೈನ್ ಶೆಟ್ಟಿ, ಕೋಡಿ ಚಕ್ರೇಶ್ವರಿ ದೇವಸ್ಥಾನದ ಗೋಪಾಲ್ ಪೂಜಾರಿ, ಮಂಗಳೂರು ಡಿಸಿಎಫ್ ದಿನೇಶ್, ಕುದುರೆಮುಖ ವನ್ಯಜೀವಿ ಸಂರಕ್ಷಣಾ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ ಕೆ., ವಿಜ್ಞಾನಿ ಡಾ.ಸೂರ್ಯ, ಎಫ್ಎಸ್ಎಲ್ ಅಧ್ಯಕ್ಷ ರಾಕೇಶ್, ಮತ್ತಿತರರು ಉಪಸ್ಥಿತರಿದ್ದರು.
ಕಡಲಾಮೆ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡ ಬಾಬು ಮೊಗವೀರ, ಗೋಪಾಲ ಬಾಳಿಗ, ಗೋಪಾಲ ಪೂಜಾರಿ ಕೋಡಿ, ಪುರಸಭಾ ಸದಸ್ಯರಾದ ನಾಗರಾಜ ಕಾಂಚನ್, ಕಮಲ ಮಂಜುನಾಥ ಪೂಜಾರಿ, ಲಕ್ಷ್ಮೀ ಬಾಯಿ, ಅಶ್ಪಕ್, ಎಫ್ಎಸ್ಎಲ್ನ ವೆಂಕಟೇಶ, ದಿನೇಶ್ ಸಾರಂಗ, ನಾಗರಾಜ ಶೆಟ್ಟಿ, ಅಶೋಕ್ ಪೂಜಾರಿ ಕೋಡಿ, ರಾಘವೇಂದ್ರ ಕೋಡಿ, ಕ್ಲೀನ್ ಕುಂದಾಪುರ ಪ್ರಾಜೆಕ್ಟ್ನ ಭರತ್ ಬಂಗೇರ, ಸ್ಥಳೀಯರಾದ ಶಂಕರ ಪೂಜಾರಿ ಕೋಡಿ, ರೀಫ್ ವಾಚ್ ಸಂಸ್ಥೆಯ ತೇಜಸ್ವಿ ಅವರನ್ನು ಗೌರವಿಸಲಾಯಿತು.
ಇದೇ ಮೊದಲ ಬಾರಿಗೆ ಕುಂದಾಪುರಕ್ಕೆ ಆಗಮಿಸಿದ ಮೈಸೂರಿನ ಮಹಾರಾಜರಿಗೆ ಈ ಭಾಗದ ದೊಡ್ಡ ದೇವಸ್ಥಾನವಾದ ಕೋಟೇಶ್ವರದ ಬ್ರಹ್ಮರಥದ ಪ್ರತಿಕೃತಿಯನ್ನು ಸ್ಮರಣಿಕೆಯಾಗಿ ಹಸ್ತಾಂತರಿಸಲಾಯಿತು.