ಮಂಗಳೂರು,ಜ 02(MSP): ಹೊಸ ವರ್ಷಾಚರಣೆಯ ಸಂಭ್ರಮದ ಗುಂಗಿನಲ್ಲಿ ಮದ್ಯ ಸೇವಿಸಿ ವಾಹನ ಚಾಲನೆ ಮಾಡುತ್ತಿದ್ದ 26 ಮಂದಿಯ ವಿರುದ್ಧ ನಗರ ಸಂಚಾರ ವಿಭಾಗದ ಪೊಲೀಸರು ಸೋಮವಾರ ರಾತ್ರಿ ಪ್ರಕರಣ ದಾಖಲಿಸಿದ್ದಾರೆ.
ಸೋಮವಾರ ರಾತ್ರಿ ನಗರದ ನಂತೂರು ಜಂಕ್ಷನ್, ಕಂಕನಾಡಿ, ಪಂಪ್ವೆಲ್, ಲಾಲ್ಭಾಗ್, ಲೇಡಿಹಿಲ್, ಎ.ಬಿ.ಶೆಟ್ಟಿ ವೃತ್ತ, ಕೊಟ್ಟಾರ ಚೌಕಿ ಸೇರಿದಂತೆ ನಗರದ ಹಲವೆಡೆ ಹಲವೆಡೆ ಏಕಕಾಲದಲ್ಲಿ ಪೊಲೀಸರು ವಾಹನಗಳ ತಪಾಸಣೆ ನಡೆಸಿದರು. ಆಲ್ಕೋಮೀಟರ್ ನೆರವಿನಿಂದ ವಾಹನ ಚಾಲಕರು ಮತ್ತು ಸವಾರರ ಉಸಿರು ಪರೀಕ್ಷೆ ನಡೆಸಿದರು. 26 ಮಂದಿ ಮದ್ಯ ಸೇವಿಸಿ ವಾಹನ ಚಾಲನೆ ಮಾಡುತ್ತಿರುವುದು ಪತ್ತೆಯಾಯಿತು.
ಮದ್ಯ ಸೇವಿಸಿ ವಾಹನ ಚಾಲನೆ ಮಾಡುತ್ತಿದ್ದವರ ವಿರುದ್ಧ ಪ್ರಕರಣ ದಾಖಲು ಮಾಡಲಾಯಿತು. ಅವರನ್ನು ವಾಹನದಿಂದ ಕೆಳಕ್ಕೆ ಇಳಿಸಿ, ಮದ್ಯ ಸೇವಿಸದ ಚಾಲಕರನ್ನು ಕರೆತಂದ ಬಳಿಕ ವಾಹನಗಳು ಮುಂದಕ್ಕೆ ಸಾಗಲು ಅವಕಾಶ ನೀಡಲಾಯಿತು. ಸಂಚಾರ ವಿಭಾಗದ ಎಸಿಪಿ ಕೆ.ಮಂಜುನಾಥ ಶೆಟ್ಟಿ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು.
ನಗರದಾದ್ಯಂತ ಗಸ್ತು: ಹೊಸ ವರ್ಷಾಚರಣೆ ವೇಳೆ ಅಹಿತಕರ ಘಟನೆಗಳು ನಡೆಯದಂತೆ ನಗರ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ್ ನೇತೃತ್ವದಲ್ಲಿ ಡಿಸಿಪಿಗಳಾದ ಹನುಮಂತರಾಯ, ಉಮಾ ಪ್ರಶಾಂತ್, ಎಲ್ಲ ಎಸಿಪಿಗಳು ಮತ್ತು ಇನ್ಸ್ಪೆಕ್ಟರ್ಗಳು ತಡರಾತ್ರಿಯವರೆಗೂ ಗಸ್ತು ತಿರುಗಿದರು.