ಉಡುಪಿ, ಏ 29 (DaijiworldNews/DB): ಕರ್ಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ತೆಂಕಬೈಲು ಪೆರ್ಡೂರು ಸಂಪರ್ಕ ರಸ್ತೆ, ಕರ್ಜೆ ಮಹಾಲಿಂಗೇಶ್ವರ ಹೌಸ್ ಸೈಟ್ ಹಾಗೂ ಪರಿಶಿಷ್ಟ ಪಂಗಡ ಮನೆ ಸಂಪರ್ಕ ರಸ್ತೆಯ ಕಾಮಗಾರಿ ಹೆಸರಿನಲ್ಲಿ ಪರಿಶಿಷ್ಟ ಪಂಗಡಕ್ಕೆ ಮೀಸಲಿರಿಸಿದ ಹಣ ವ್ಯರ್ಥ ಮಾಡಲಾಗುತ್ತಿದೆ ಎಂದು ಆರೋಪಿಸಿ ಜಿಲ್ಲಾ ಆರ್ಟಿಐ ಕಾರ್ಯಕರ್ತರು ಮತ್ತು ದಲಿತ ಸಂಘ ಭೀಮವಾದ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿ ಸ್ಥಳದಲ್ಲಿ ಪ್ರತಿಭಟಿಸಿದ ಘಟನೆ ನಡೆಯಿತು. ಆದರೆ ಇದಕ್ಕೆ ಗ್ರಾಮಸ್ಥರು ಆಕ್ಷೇಪಿಸಿದ್ದು, ನಮಗೆ ಸಿಗುತ್ತಿರುವ ಸೌಲಭ್ಯಕ್ಕೆ ಹೊರಗಿನವರು ಅಡ್ಡಿಯಾಗುತ್ತಿದ್ದಾರೆ ಎಂದು ಪ್ರತಿರೋಧ ಒಡ್ಡಿದ್ದಾರೆ.
ಬುಡಕಟ್ಟು ಉಪ ಯೋಜನೆಯಲ್ಲಿ ಸರ್ಕಾರದಿಂದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ 2 ಕೋಟಿ ರೂ. ಮಂಜೂರಾಗಿದ್ದು, ಕಾಮಗಾರಿ ಭರದಿಂದ ಸಾಗುತ್ತಿದೆ. ಈ ನಡುವೆ ಪರಿಶಿಷ್ಟ ಪಂಗಡಕ್ಕೆ ಮೀಸಲಿರಿಸಿದ ಹಣದಲ್ಲಿ ರಸ್ತೆ ಮಾಡಿ ಹಣ ವ್ಯರ್ಥ ಮಾಡುತ್ತಿದ್ದಾ ಎಂದು ಆರೋಪಿಸಿ ಆರ್ಟಿಐ ಕಾರ್ಯಕರ್ತರು ಮತ್ತು ದಲಿತ ಸಂಘ ಭೀಮವಾದ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದರು.
ಆದರೆ ಗ್ರಾಮಸ್ಥರು ಮಾತನಾಡಿ, ಹೊಸೂರು ಗ್ರಾಮದಲ್ಲಿ ಸುಮಾರು 35 ಕ್ಕೂ ಹೆಚ್ಚಿನ ಪರಿಶಿಷ್ಟ ಪಂಗಡ ಮನೆ ಮತ್ತು ಬೇರೆ ಸಮುದಾಯದ ಮನೆಗಳು ಇದ್ದು ಕರ್ಜೆಯ ಮುಖ್ಯ ರಸ್ತೆಗೆ ಸಂಪರ್ಕಿಸಲು ಬೇರೆ ರಸ್ತೆ ಇಲ್ಲ. ಈಗ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗು ಶಾಸಕ ರಘುಪತಿ ಭಟ್ ಅವರ ಪ್ರಯತ್ನದಿಂದ 2 ಕೋಟಿ ಅನುದಾನ ಬಿಡುಗಡೆಯಾಗಿದ್ದು ರಸ್ತೆ ಕಾಮಗಾರಿ ಆರಂಭವಾಗಿದೆ. ರಸ್ತೆ ವ್ಯವಸ್ಥೆ ಇಲ್ಲದೆ ಕಳೆದ ಹಲವು ವರ್ಷದಿಂದ ಇಲ್ಲಿನ ಜನರು ಮಣ್ಣು ರಸ್ತೆಯಲ್ಲಿ ಹೋಗಬೇಕಿತ್ತು. ಮಳೆಗಾಲದಲ್ಲಂತೂ ನಡೆದಾಡುವುದೇ ಕಷ್ಟವಾಗಿತ್ತು. ಈಗ ರಸ್ತೆ ವ್ಯವಸ್ಥೆ ಆಗುತ್ತಿದ್ದರೆ ಕೆಲವರು ಬೇರೆ ಊರಿನಿಂದ ಬಂದು ನಮಗೆ ಸಿಗುತ್ತಿರುವ ಸೌಲಭ್ಯಕ್ಕೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಮರಾಠಿ ಸಂಘದ ಅಧ್ಯಕ್ಷ ಅನಂತ ನಾಯ್ಕ ಸರಳಬೆಟ್ಟು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಿ.ಎನ್. ಶಂಕರ ಪೂಜಾರಿ, ಭಾರತೀಯ ಜನತಾ ಪಕ್ಷದ ಗ್ರಾಮಾಂತರ ಅಧ್ಯಕ್ಷೆ ವೀಣಾ ನಾಯ್ಕ್, ಗ್ರಾಮ ಪಂಚಾಯತ್ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಕರ್ಜೆ ಅವರು ಕಾಮಗಾರಿಗೆ ಅಡ್ಡಿ ಪಡಿಸುತ್ತಿರುವುದನ್ನು ಖಂಡಿಸಿದರು.
ಬಿಜೆಪಿ ಎಸ್ ಟಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಉಮೇಶ್ ನಾಯ್ಕ್ ಚೇರ್ಕಾಡಿ, ಅಶೋಕ್ ಶೆಟ್ಟಿ ಮೈರ್ಮಾಡಿ , ಕಿರಣ್ ಶೆಟ್ಟಿ , ಜಿಲ್ಲಾ ಎಸ್ ಟಿ ಮೋರ್ಚಾದ ಅಧ್ಯಕ್ಷ ನಿತ್ಯಾನಂದ್ ನಾಯ್ಕ್ ಉಪಸ್ಥಿತರಿದ್ದರು.