ಮೂಡುಬಿದಿರೆ, ಜ 02(MSP): ಇಲ್ಲಿನ ಲಾವಂತ ಬೆಟ್ಟು ರಸ್ತೆಯಲ್ಲಿ ದ್ವಿಚಕ್ರವಾಹನದಲ್ಲಿ ಚಲಿಸುತ್ತಿದ್ದ ಯುವಕ ಹೃದಯಾಘಾತಕ್ಕೆ ಒಳಗಾಗಿ ರಸ್ತೆಯಲ್ಲೇ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಜ.1 ರ ಮಂಗಳವಾರ ನಡೆದಿದೆ. ಮೃತಪಟ್ಟವರನ್ನು ಮಾರೂರಿನ ದಿವಂಗತ ಗಣಪತಿ ಆಚಾರ್ಯರ ಏಕೈಕ ಪುತ್ರ ಪ್ರಸಾದ್ ಆಚಾರ್ಯ (32)ಎಂದು ಗುರುತಿಸಲಾಗಿದೆ.
ಪ್ರಸಾದ್ ಕೆಲಸದ ನಿಮಿತ್ತ ತಮ್ಮ ಆಕ್ಟಿವಾ ವಾಹನದಲ್ಲಿ ಮೂಡುಬಿದಿರೆಗೆ ಬಂದು ಬಳಿಕ ವಾಪಾಸ್ ಮಾರೂರಿಗೆ ಹೊರಟಿದ್ದರು. ಈ ವೇಳೆ ಪೇಟೆಯಲ್ಲಿ ಪ್ರಕಾಶ್ ಮಿಲ್ ಬಳಿ ಬಂದಾಗ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡು, ನಡು ರಸ್ತೆಯಲ್ಲೇ ಸ್ವಲ್ಪ ಹೊತ್ತು ವಾಹನ ನಿಲ್ಲಿಸಿದ್ದಾರೆ. ಅಲ್ಲೇ ಕುಸಿದು ಬಿದ್ದಾಗ ಸ್ಥಳೀಯರು ಧಾವಿಸಿ ಉಪಚರಿಸಿ ಆಸ್ಪತ್ರೆಗೆ ದಾಖಲಿಸಿದರೂ ಅವರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಅವಿವಾಹಿತರಾಗಿದ್ದ ಪ್ರಸಾದ್ ಹಲವು ವರ್ಷಗಳಿಂದ ವಿದೇಶದಲ್ಲಿದ್ದು ಬಳಿಕ ಊರಿಗೆ ಬಂದು ನೆಲೆಸಿದ್ದರು. ನಂತರ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಇಂಟೀರಿಯರ್ ಡೆಕೋರೇಶನ್ ಸಿಬ್ಬಂದಿಯಾಗಿದ್ದರು. ಊರಿಗೆ ಬಂದಿದ್ದ ಸಂದರ್ಭದಲ್ಲಿ ಸಾವು ಸಂಭವಿಸಿದ್ದು ಮನೆಯ ಆಧಾರ ಸ್ಥಂಭವಾಗಿದ್ದರು. ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.