ಮಂಗಳೂರು, ಏ 29 (DaijiworldNews/DB): ನಿರ್ಮಾಣ ಹಂತದ ಕಟ್ಟಡದ ಸ್ಲಾಬ್ ಕುಸಿದು ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ನಗರದ ಉರ್ವಾ ಮಾರಿಗುಡಿ ದೇವಸ್ಥಾನದ ಬಳಿ ಗುರುವಾರ ಸಂಜೆ ನಡೆದಿದೆ. ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗೋವಾ ಮೂಲದ ಸಲೀಂ ಶೇಖ್ (45) ಮೃತಪಟ್ಟವರು. ಈತ ಕೆಲ ದಿನಗಳ ಹಿಂದಷ್ಟೇ ಕೆಲಸ ಕೇಳಿಕೊಂಡು ಗೋವಾದಿಂದ ಮಂಗಳೂರಿಗೆ ಬಂದಿದ್ದ ಎನ್ನಲಾಗಿದೆ.
ಮಾರಿಗುಡಿ ದೇವಳದ ಬಳಿ ಬಂಗಲೆ ಮಾದರಿಯ ಮನೆ ನಿರ್ಮಾಣವಾಗುತ್ತಿದ್ದು, ಕಾಂಕ್ರಿಟ್ ಸ್ಲಾಬ್ ಗಟ್ಟಿಯಾಗಿ ನಿಲ್ಲಲು ನಿಲ್ಲಿಸಿದ್ದ ಕಂಬಗಳನ್ನು ತೆರವು ಮಾಡುತ್ತಿದ್ದಾಗ ಸ್ಲಾಬ್ ಕುಸಿದು ಬಿದ್ದಿದೆ. ಸ್ಲಾಬ್ ಅಡಿಗೆ ಬಿದ್ದ ಸಲೀಂ ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದು, ತತ್ಕ್ಷಣ ಅವರನ್ನು ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತು. ಈ ವೇಳೆಗಾಗಲೇ ಅವರು ಮೃತಪಟ್ಟಿದ್ದರು. ಕಂಬ ತೆರವು ಮಾಡುತ್ತಿದ್ದ ಕಾವೂರು ಪಂಜಿಮೊಗರು ನಿವಾಸಿ ಕಿರಣ್ ಮತ್ತು ಶಿವಮೊಗ್ಗ ಸೊರಬದ ಹನುಮಂತ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಮಗಾರಿಯಲ್ಲಿ ಲೋಪ ಆಗಿರುವುದೇ ಘಟನೆಗೆ ಕಾರಣ ಎನ್ನಲಾಗಿದೆ. ಸ್ಥಳಕ್ಕೆ ಉರ್ವ ಠಾಣೆಯ ಪೊಲೀಸರು ಆಗಮಿಸಿದ್ದು, ಸದ್ಯ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ನಿಲ್ಲಿಸಲಾಗಿದೆ.
ಮಂಗಳೂರಿನಲ್ಲಿ ಉದ್ಯಮಿಯಾಗಿರುವ ಗುಜರಾತ್ ಮೂಲದ ರುಗುನಾಥ್ ಶರ್ಮ ಎಂಬವರಿಗೆ ಸೇರಿದ ಸೈಟ್ ಇದಾಗಿದ್ದು, ಸ್ಥಳದಲ್ಲಿ ಬಂಗಲೆ ನಿರ್ಮಾಣವಾಗುತ್ತಿದೆ. ಮಹೇಶ್ ಕಾಮತ್ ಕಾಮಗಾರಿಯ ಗುತ್ತಿಗೆ ನಡೆಸುತ್ತಿದ್ದಾರೆ. ನಿರ್ಲಕ್ಷ್ಯ ಸಂಬಂಧ ಮನೆ ಮಾಲಕ, ಕಾಂಟ್ರಾಕ್ಟರ್ ಮತ್ತು ಸೈಟ್ ಸೂಪರ್ವೈಸರ್ ವಿರುದ್ದ ಸೆಕ್ಷನ್ 304 ಎ ಮತ್ತು 338 ಅಡಿ ಪ್ರಕರಣ ದಾಖಲಾಗಿದೆ.