ಕಾಸರಗೋಡು, ಜ 02(SM): ಇತಿಹಾಸದಲ್ಲಿ ವಿನೂತನ ದಾಖಲೆ ರಚಿಸುವ ಮೂಲಕ ಸ್ತ್ರೀ ಶಕ್ತಿಯ ಪ್ರತೀಕವಾಗಿ ರಾಜ್ಯ ಮಟ್ಟದ ಮಹಿಳಾ ಗೋಡೆ ಮಂಗಳವಾರ ನಿರ್ಮಾಣವಾಗಿದೆ.
ಪ್ರಗತಿಪರ ಮೌಲ್ಯಗಳ ಸಂರಕ್ಷಣೆ, ಸ್ತ್ರೀ-ಪುರುಷ ಸಮಾನತೆ ಸಹಿತ ಸಂವಿಧಾನಬದ್ಧ ಸಾಮಾಜಿಕ ನೀತಿ ಸಾರುವ ಮಹಿಳಾಗೋಡೆ ಸಾಕಾರಗೊಂಡು ಇತಿಹಾಸದ ಪುಟಗಳಲ್ಲಿ ಸ್ಥಾನ ಪಡೆದಿದೆ. ರಾಜ್ಯ ಸರಕಾರದ ಕನಸಾದ ಈ ಸಾಂಸ್ಕೃತಿಕ ಆಂದೋಲನದ ಯಶಸ್ಸಿಗೆ ನಡೆದ ಅಹೋರಾತ್ರೆಯ ದುಡಿಮೆ ಸಫಲವಾಗಿದೆ. ಜಿಲ್ಲಾಡಳಿತ ಈ ಸಂಬಂಧ ಅವಿಶ್ರಾಂತ ಯತ್ನ ನಡೆಸಿದೆ.
ಕಾಸರಗೋಡಿನಿಂದ ತಿರುವನಂತಪುರಂ ವರಗೆ ನಡೆದ ಮಹಿಳಾ ಗೋಡೆಯ ಆರಂಭ ಗಡಿನಾಡು ಕಾಸರಗೋಡಿನಲ್ಲಿ ನಡೆದ ಹಿನ್ನೆಲೆ ನಿರೀಕ್ಷೆಗೂ ಮೀರಿ ಮಹಿಳೆಯರು ಭಾಗವಹಿಸಿ ಈ ಸಾತ್ವಿಕ ಆಂದೋಲನಕ್ಕೆ ಹೆಚ್ಚುವರಿ ಬಲ ತುಂಬಿದರು.
ಕಾಸರಗೋಡು ನೂತನ ಬಸ್ ನಿಲ್ದಾಣ ಬಳಿಯ ವೃತ್ತದ ಸಮೀಪ ಆರಂಭಗೊಂಡ ಗೋಡೆ ಪ್ರೆಸ್ ಕ್ಲಬ್ ಜಂಕ್ಷನ್ ಮೂಲಕ ಕೆ.ಎಸ್.ಟಿ.ಪಿ. ರಸ್ತೆಯ ಮುಖಾಂತರ ಕಾಲಿಕಡವು ವರೆಗಿನ 44 ಕಿಮೀ ವ್ಯಾಪ್ತಿಯಲ್ಲಿ ಜಿಲ್ಲಾ ಮಟ್ಟದ ಗೋಡೆ ರಚನೆಗೊಂಡಿತ್ತು.