ಉಡುಪಿ, ಏ 29 (DaijiworldNews/MS): ಬಿಜೆಪಿ ಸರಕಾರದಲ್ಲಿ ಹಿಂದುತ್ವ ಕಾರ್ಯಕರ್ತರಿಗೆ ರಕ್ಷಣೆ ಇಲ್ಲ. ಹಿಂದುತ್ವಕ್ಕೆ ನ್ಯಾಯ ಕೊಡಿಸಲು ನಮಗೆ ಗಾಂಧಿ ತತ್ವ ಬೇಡ, ಗೂಡ್ಸೆ ತತ್ವ ಬೇಕು. ರಾಜಕೀಯದಡಿಯಲ್ಲಿ ಹಲವಾರು ಹಿಂದೂ ಕಾರ್ಯಕರ್ತರು ಜೈಲಲ್ಲಿ ಬಂಧಿಯಾಗಿದ್ದಾರೆ. ಮುಂದೆ ನಾವು ಅವರನ್ನು ಬಿಡುಗಡೆ ಮಾಡಿಸುವ ಕೆಲಸ ಮಾಡ್ತೇವೆ. ಮಾಹಿತಿ ಹಕ್ಕಿನಿಂದ ಅವರ ಹೆಸರನ್ನು ಪಡೆದುಕೊಳ್ಳಲಾಗುತ್ತದೆ. ಅವರ ಕುಟುಂಬದವರಿಗೆ ಕಾನೂನು ನೆರವು ಮತ್ತು ಆರ್ಥಿಕ ನೆರವು ನೀಡುತ್ತೇವೆ ಎಂದು ಅಖಿಲ ಹಿಂದೂ ಮಹಾ ಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಹೇಳಿದರು.
ಅವರು ಶುಕ್ರವಾರ ಉಡುಪಿಯ ಓಶಿಯನ್ ಪರ್ಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, "ರಾಜ್ಯದಲ್ಲಿ ದುರ್ಬಲ ಗೃಹಮಂತ್ರಿ ಆಗಿದ್ದವರು ಈಗ ಮುಖ್ಯಮಂತ್ರಿ ಆಗಿದ್ದಾರೆ. ಬಿಜೆಪಿ ಸರಕಾರದಲ್ಲಿ ಹಿಂದುತ್ವ ಕಾರ್ಯಕರ್ತರಿಗೆ ರಕ್ಷಣೆ ಇಲ್ಲ. ಹಿಂದೂಗಳು ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳಬೇಕು.ಹಿಂದೂಗಳು ಪರ್ಯಾಯ ರಾಜಕಾರಣದತ್ತ ಎದುರು ನೋಡುತ್ತಿದ್ದಾರೆ.ಈಗಾಗಲೇ ಹಲವಾರು ಬಿಜೆಪಿ ಕಾರ್ಯಕರ್ತರು ಹಿಂದೂ ಸಭಾದತ್ತ ಮುಖ ಮಾಡಿದ್ದಾರೆ. ನಮಗೆ ಓಲೈಕೆ ರಾಜಕಾರಣ ಬೇಡ ಎಂದು ಹೇಳಿದರು.
ಸ್ವಯಂ ರಕ್ಷಣೆಗೆ ಆಯುಧ ಇಟ್ಟುಕೊಳ್ಳಿ ಎಂದಿದ್ದು ಇನ್ನೊಬ್ಬರ ಮೇಲೆ ಆಕ್ರಮಣ ಮಾಡಲು ಅಲ್ಲ. ನಮ್ಮ ಸ್ವಯಂ ರಕ್ಷಣೆಗಾಗಿ. ಅಯೋಧ್ಯೆ ಹೋರಾಟ ಮಾಡಿದ್ದೂ ಹಿಂದೂ ಮಹಾಸಭಾ ಆದರೆ ರಾಮನನ್ನು ರಸ್ತೆಗೆ ತಂದು ನಿಲ್ಲಿಸಿದ್ದು ಇದೇ ಬಿಜೆಪಿ ಪಕ್ಷ. ಇದೀಗ ಪಕ್ಷ ಹಿಂದುತ್ವ ಪ್ರತಿಪಾದಿಸುತ್ತಿಲ್ಲ ಎನ್ನುವುದು ವಿಷಾದನೀಯ ವಿಚಾರ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಸರಕಾರ ಸಂಪೂರ್ಣ ನಿಷ್ಕ್ರಿಯವಾಗಿದೆ. ರಾಜ್ಯದ ಮೂಲೆ ಮೂಲೆಯಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ / ಹತ್ಯೆಗಳಾದರೂ, ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸರಕಾರ ಮೌನವಾಗಿದೆ ಎಂದು ಆರೋಪಿಸಿದರು.
ಕ್ಯಾಬಿನೆಟ್ ನಲ್ಲಿ ಮೂಲ ಬಿಜೆಪಿಗರ ಸಂಖ್ಯೆ ಕಡಿಮೆ, ಅಂದು ಮಾಡಿಕೊಂಡ ಸಂಖ್ಯೆಯೇ ಹೆಚ್ಚು ಹಾಗಾಗಿ ಪಕ್ಷದ ಗುಣಗಳು ಎಲ್ಲಿ ಬಿಟ್ಟು ಹೋಗುತ್ತೆ ? ರಾಜ್ಯದಲ್ಲಿ 40 % ಕಮಿಷನ್ ನ ಸರಕಾರದ ವಿರುದ್ಧ, ಕಾಂಗ್ರೆಸ್ ಮೌನವಾಗಿದೆ ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಸಮಾನವಾಗಿ ರಾಜ್ಯದ ಜನರನ್ನು ಲೂಟಿ ಮಾಡುತ್ತಿದೆ. ಮುಂದಿನ ಚುನಾವಣೆಯಲ್ಲಿ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದು, ಈ ಬಗ್ಗೆ ಪಕ್ಷ ಸಂಘಟನೆಯತ್ತ ಗಮನಹರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಹಿಂದೂ ಮಹಾ ಸಭಾದ ಜಿಲ್ಲಾಧ್ಯಕ್ಷರಾದ ರಾಮಕೃಷ್ಣ ಶೆಟ್ಟಿ, ಬಂಟ್ವಾಳ ಕ್ಷೇತ್ರದ ಅಧ್ಯಕ್ಷ ಹರ್ಷ ನಾಯಕ್ , ಪ್ರತಾಪ್ , ಪ್ರಮೋದ್ ಉಚ್ಚಿಲ ಉಪಸ್ಥಿತರಿದ್ದರು.