ಮಂಗಳೂರು, ಏ 29 (DaijiworldNews/MS): ಬಸ್ ಚಾಲನೆ ಸಂದರ್ಭ ಗುಟ್ಕಾ ಜಗಿಯುತ್ತಿದ್ದ ಚಾಲಕರಿಗೆ ಮಂಗಳೂರು ಆರ್ಟಿಒ ಅಧಿಕಾರಿಗಳು ದಂಡ ವಿಧಿಸಿ ಬಿಸಿ ಮುಟ್ಟಿಸಿದ್ದಾರೆ.
ಬಿಜೈ ಬಳಿ ರಾತ್ರಿ ದಾಖಲೆ ತಪಾಸಣೆ ಸಂದರ್ಭ 2 ಬಸ್ಗಳ ಚಾಲಕರು ಗುಟ್ಕಾ ಜಗಿಯುತ್ತ ಅಧಿಕಾರಿಗಳ ಮುಂದೆ ಬಂದಿದ್ದಾರೆ. ಇದನ್ನು ಗಮನಿಸಿದ ಆರ್ಟಿಒ ಅಧಿಕಾರಿಗಳು ಇಬ್ಬರು ಚಾಲಕರಿಗೂ ತಲಾ 5,000 ರೂ. ದಂಡ ವಿಧಿಸಿದ್ದಾರೆ.
“ಮದ್ಯ ಸೇವಿಸಿ ವಾಹನ ಚಲಾಯಿಸುವವರ ವಿರುದ್ಧ ಮಾತ್ರವಲ್ಲದೆ ಯಾವುದೇ ರೀತಿಯ ಅಮಲು ಪದಾರ್ಥಗಳನ್ನು ಸೇವಿಸಿ ಚಲಾಯಿಸುವವರ ವಿರುದ್ಧ ಕೂಡ ಪ್ರಕರಣ ದಾಖಲಿಸಿ, ದಂಡ ವಿಧಿಸಲು ಅವಕಾಶವಿದೆ. ಅದರಂತೆ ದಂಡ ವಿಧಿಸಲಾಗಿದೆ’ ಎಂದು ಆರ್ಟಿಒ ಆರ್.ಎಂ. ವರ್ಣೇಕರ್ ಪ್ರತಿಕ್ರಿಯಿಸಿದ್ದಾರೆ.