ಕುಂದಾಪುರ,ಜ 01(MSP): ಜಗತ್ತಿನ ಶ್ರೇಷ್ಠ ವಿಶ್ವಸ್ತ ದತ್ತಿನಿಧಿಗಳಲ್ಲಿ ರೋಟರಿ ದತ್ತಿನಿಧಿಯೂ ಒಂದು. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಇಂಥಹ ಕೊಡುಗೆಗಳನ್ನು ನೀಡುತ್ತಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಸೇವೆಯಲ್ಲಿ ಗುರುತಿಸಿಕೊಂಡಿರುವ ರೋಟರಿ ಸಂಸ್ಥೆ ಇಂತಹ ದತ್ತಿನಿಧಿಗಳನ್ನು ನೀಡುತ್ತಿದ್ದು, ವಂಡ್ಸೆ ಸರ್ಕಾರಿ ಶಾಲೆಗೆ 26 ಲಕ್ಷ ರೂಪಾಯಿ ಗ್ಲೋಬಲ್ ಗ್ರ್ಯಾಂಟ್ ದೊರಕುತ್ತಿದೆ. ಇದು ಸುವರ್ಣಕ್ಷರದಲ್ಲಿ ಬರೆದಿಡಬಹುದಾದ ದಿನವಾಗಿದೆ ಎಂದು ರೋಟರಿ ಜಿಲ್ಲೆ 3182 ಜಿಲ್ಲಾ ಗವರ್ನರ್ ರೋ.ಅಭಿನಂದನ್ ಶೆಟ್ಟಿ ಹೇಳಿದರು.
ಅವರು ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಮತ್ತು ರೋಟರಿ ಕ್ಲಬ್ ಗಂಗೊಳ್ಳಿ, ಅಂತರಾಷ್ಟ್ರೀಯ ರೋಟರಿ ದತ್ತಿನಿಧಿ ಮತ್ತು ಕೆನಡಾ ದೇಶದ ರೋಟರಿ ಜಿಲ್ಲೆ 7070 ಮತ್ತು ರೋಟರಿ ಕ್ಲಬ್ ವಷಾವಾ (ಪಾರ್ಕ್ವುಡ್) ಇವುಗಳ ಸಹಯೋಗದೊಂದಿಗೆ ರೋಟರಿ ಸಂಸ್ಥೆ ಗ್ಲೊಬಲ್ ಗ್ರ್ಯಾಂಟ್ನಲ್ಲಿ ರೂ.26 ಲಕ್ಷ ವಂಡ್ಸೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ದೊರೆತಿದ್ದು ಅದರ ಅಂಗವಾಗಿ ರೂ.16,50,000 ಮೌಲ್ಯದ ಶಾಲಾ ವಾಹನವನ್ನು ವಂಡ್ಸೆ ಶಾಲೆಗೆ ಹಸ್ತಾಂತರಿಸಿ ಮಾತನಾಡಿದರು.
ಪೊಲೀಯೋ ನಿರ್ಮೂಲನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ರೋಟರಿ ಶಿಕ್ಷಣ ವ್ಯವಸ್ಥೆಗೆ ಮೂಲಭೂತ ಅವಶ್ಯಕತೆಗಳನ್ನು ಕಲ್ಪಿಸಿಕೊಡುವಲ್ಲಿಯೂ ಶ್ರಮಿಸುತ್ತಿದೆ. ಜನರಿಗೆ ಒಳ್ಳೆದನ್ನು ಮಾಡಲು ರೋಟರಿ ಸದಸ್ಯರು ಹೆಚ್ಚು ಉತ್ಸುಕರಾಗುತ್ತಾರೆ. ಅದೇ ರೀತಿ ವಂಡ್ಸೆಯಲ್ಲಿಯೂ ರೋಟರಿ ಸಂಸ್ಥೆಯನ್ನು ಸ್ಥಾಪಿಸಲು ಸಾಧ್ಯವಿದೆ ಎಂದರು.
ರೋಟರಿ ಜಿಲ್ಲೆ 3182ರ ದತ್ತಿನಿಧಿ ಅಧ್ಯಕ್ಷ ಸದಾನಂದ ಛಾತ್ರ ಮಾತನಾಡಿ, ಗ್ಲೊಬಲ್ ಗ್ರ್ಯಾಂಟ್ ಮೂಲಕ 26 ಲಕ್ಷ ರೂ. ಈ ಶಾಲೆಗೆ ಸಿಗುತ್ತಿದೆ. ಮೊದಲ ಹಂತದಲ್ಲಿ ಬಸ್ ವ್ಯವಸ್ಥೆಯಾಗಿದೆ. ಮುಂದೆ ಸುಸಜ್ಜಿತ ಶೌಚಾಲಯ ಸಂಕೀರ್ಣ, ಕಂಪ್ಯೂಟರ್, ಪ್ರಾಜೆಕ್ಟರ್, ಶಿಕ್ಷಕರುಗಳಿಗೆ ತಾಂತ್ರಿಕ ತರಬೇತಿ, ಇಂಗ್ಲೀಷ್ ಬೋಧನೆಯ ಬಗ್ಗೆ ತರಬೇತಿ ನೀಡಲಾಗುವುದು. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು.
ಗಂಗೊಳ್ಳಿ ರೋಟರಿ ಅಧ್ಯಕ್ಷರಾದ ರಮಾನಾಥ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ವಲಯ ೧ರ ರೋಟರಿ ಸಹಾಯಕ ಗವರ್ನರ್ ಕೆ.ಸುಭಾಶ್ಚಂದ್ರ ಶೆಟ್ಟಿ, ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷ ಜೋನ್ಸನ್ ಡಿ’ಅಲ್ಮೇಡಾ, ಗ್ಲೋಬಲ್ ಗ್ರ್ಯಾಂಟ್ ಕಾರ್ಯಕ್ರಮ ಸಂಯೋಜಕರು, ಗಂಗೊಳ್ಳಿ ರೋಟರಿ ಮಾಜಿ ಅಧ್ಯಕ್ಷರಾದ ಎಚ್.ಗಣೇಶ ಕಾಮತ್, ಮೂಕಾಂಬಿಕಾ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ, ಗ್ರಾ.ಪಂ.ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ಶಾಲಾ ಮುಖ್ಯೋಪಾಧ್ಯಾಯರಾದ ಮೋಹಿನಿ ಬಾಯಿ, ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಮಂಜುನಾಥ ಗಾಣಿಗ ಎ.ಜಿ ಉಪಸ್ಥಿತರಿದ್ದರು.