ಬಂಟ್ವಾಳ, ಏ 28 (DaijiworldNews/MS): ರಾಷ್ಟ್ರೀಯ ಹಾಗೂ ಸಾಂಸ್ಕೃತಿಕ ವಿಚಾರಧಾರೆಗಳುಳ್ಳ ಭಾರತೀಯ ಜನತಾ ಪಾರ್ಟಿಯ "ವಸುದೈವ ಕುಟುಂಬಕಂ" ಎನ್ನುವ ಪರಿಕಲ್ಪನೆ ಕಮಲೋತ್ಸವದಲ್ಲಿ ಸಾಕಾರಗೊಂಡಿದ್ದು ದೇಶದಲ್ಲೇ ಮೊದಲ ಬಾರಿಗೆ ಬಂಟ್ವಾಳದಲ್ಲಿ ನಡೆದಿರುವ ಕಮಲೋತ್ಸವ ದ ಪರಿಕಲ್ಪನೆಯನ್ನು ರಾಜ್ಯವ್ಯಾಪಿ ವಿಸ್ತರಿಸುವುದಾಗಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ , ಮಂಗಳೂರು ಸಂಸದ ನಳಿನ್ಕುಮಾರ್ ಕಟೀಲು ಹೇಳಿದರು.
ಶಾಸಕ ರಾಜೇಶ್ ನಾಯ್ಕ್ ಅವರ ಒಡ್ಡೂರು ಫಾರ್ಮ್ ಹೌಸ್ನಲ್ಲಿ, ಶಾಸಕರ ನೇತೃತ್ವದಲ್ಲಿ, ಬಂಟ್ವಾಳ ಬಿಜೆಪಿ ಮಂಡಲದ ವತಿಯಿಂದ ನಡೆದ ಕಮಲೋತ್ಸವ ವನ್ನು ಉದ್ಘಾಟಿಸಿ ಮಾತನಾಡಿದರು.
ರಾಜೇಶ್ ನಾಯ್ಕ್ ಅವರನ್ನು ಕೇವಲ ಶಾಸಕನಾಗಿ ಕಂಡುಕೊಂಡಿಲ್ಲ, ಮನೆಮನೆಯ ಮಗನಾಗಿ, ನಾಯಕನಾಗಿ ಕಂಡುಕೊಂಡಿದ್ದಾರೆ ಎನ್ನುವುದಕ್ಕೆ ಕಮಲೋತ್ಸವದಲ್ಲಿ ಭಾಗವಹಿಸಿರುವ ಸಹಸ್ರಸಹಸ್ರ ಜನಸಂಖ್ಯೆಯ ಭಾಗವಹಿಸುವಿಕೆಯೇ ಸಾಕ್ಷಿ ಎಂದರು.
ಒಡ್ಡೂರು ಬಂಟ್ವಾಳ ಹಾಗೂ ಉತ್ತರ ಕ್ಷೇತ್ರದ ಸಂಗಮಕ್ಷೇತ್ರವಾಗಿದೆ ಎಂದ ಅವರು,ಶ್ರೀಮಂತಿಕೆ ಎಲ್ಲರಲ್ಲೂ ಇರುತ್ತದೆ, ಆದರೆ ಹೃದಯ ಶ್ರೀಮಂತಿಕೆ ಇರುವುದು ಕೆಲವರಲ್ಲಿ ಮಾತ್ರ, ರಾಜೇಶ್ ನಾಯ್ಕ್ ಅಂತವರು ಎಂದರು. 70 ವರ್ಷಗಳಲ್ಲಿ ಆಗದ ಕೆಲಸಗಳು, 4 ವರ್ಷಗಳಲ್ಲಿಆಗಿ ಹೋಗಿದೆ ಎಂದವರು ಶ್ಲಾಘಿಸಿದರು.
ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ನಾಲ್ಕು ವರ್ಷಗಳಲ್ಲಿ ರಾಜೇಶ್ ನಾಯ್ಕ್ ಅವರು ಮಾದರಿ ಶಾಸಕನಾಗಿ ಗುರುತಿಸಿಕೊಂಡಿದ್ದಾರೆ , ಕಮಲೋತ್ಸವದ ಮೂಲಕ ಕ್ಷೇತ್ರದ ಬಿಜೆಪಿ ಸಂಘಟನೆಗೆ ಹೆಚ್ಚು ಶಕ್ತಿ ಬಂದಿದೆ ಎಂದರು. ಸಚಿವ ಎಸ್.ಅಂಗಾರ ಮಾತನಾಡಿ, ಬಿಜೆಪಿ ಹಿಂದುತ್ವದ ಆಧಾರದಲ್ಲಿ ಅಧಿಕಾರಕ್ಕೆ ಬಂದಿದ್ದು, ಶಾಂತಿ ಸೌಹಾರ್ದತೆಯೊಂದಿಗೆ ಅಭಿವೃದ್ಧಿ ಸಾಧ್ಯ ಎನ್ನುವುದನ್ನು ಶಾಸಕ ರಾಜೇಶ್ ನಾಯ್ಕ್ ಕಳೆದ ನಾಲ್ಕು ವರ್ಷಗಳಲ್ಲಿ ಸಾಧಿಸಿ ತೋರಿಸಿದ್ದಾರೆ ಎಂದರು.
ಶಾಸಕ ರಾಜೇಶ್ ನಾಯ್ಕ್ಮಾತನಾಡಿ, ಕ್ಷೇತ್ರದ ಕಾರ್ಯಕರ್ತರ ಮೇಲೆ ವಿಶ್ವಾಸವಿಟ್ಟು, ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ನಿರೀಕ್ಷೆಗೂ ಮೀರಿದ ಕಾರ್ಯಕರ್ತರ ಪಾಲ್ಗೊಳ್ಳುವಿಕೆಯೊಂದಿಗೆ ಯಶಸ್ವಿಯಾಗಿದೆ ಎಂದವರು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ ಮಾತನಾಡಿ, ಬಂಟ್ವಾಳ ಕಮಲೋತ್ಸವದ ಮೂಲಕ ಜಿಲ್ಲೆಗೆ ಮಾದರಿಯಾಗಿದ್ದರೆ, ದ.ಕ.ಜಿಲ್ಲೆ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಹೇಳಿದರು.
ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಶುಭಹಾರೈಸಿದರು. ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ರುಕ್ಮಯ ಪೂಜಾರಿ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ನಿರ್ದೇಶಕಿ ಸುಲೋಚನಾ ಭಟ್, ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವೀಂದ್ರ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬೂಡಾ ಅಧ್ಯಕ್ಷ ದೇವದಾಸ್ ಶೆಟ್ಟಿ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ ಕಾರ್ಯಕ್ರಮ ನಿರ್ವಹಿಸಿದರು. ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ ವಂದಿಸಿದರು.