ಆರ್. ಬಿ. ಜಗದೀಶ್
ಕಾರ್ಕಳ, ಏ 28 (DaijiworldNews/MS): ಇತ್ತೀಚಿನ ದಿನಗಳಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಮುಂಡ್ಲಿ ಡ್ಯಾಂನ ತಳಭಾಗದಲ್ಲಿ ಹೂಳು ತುಂಬಿಕೊಂಡಿದೆ. ಇಲ್ಲಿಂದಲೇ ಕಾರ್ಕಳ ಪುರಸಭಾ ವ್ಯಾಪ್ತಿ ಸಮಗ್ರ ಕುಡಿಯುವ ನೀರು ಸರಬರಾಜು ಆಗುತ್ತಿದ್ದು, ಕಿಂಡಿ ಅಣೆಕಟ್ಟಿನ ತಳಭಾಗದಲ್ಲಿ ಶೇಖರಣೆ ಗೊಂಡಿರುವ ಹೂಳು ನೀರಿನೊಂದಿಗೆ ಮಿಶ್ರಣಗೊಂಡು ಅದು ನೇರವಾಗಿ ಜಾಕ್ಹಾಲ್ ಮೂಲಕ ರಾಮಸಮುದ್ರದ ನೀರು ಶುದ್ಧೀಕರಣ ಘಟಕಕ್ಕೆ ಸರಬರಾಜು ಆಗುತ್ತಿದೆ. ಹೆಸರಿಗಷ್ಟೇ ಇಲ್ಲಿ ನೀರು ಶುದ್ಧೀಕರಣ ಘಟಕ ಇದ್ದರೂ, ಕಳೆದ ಎರಡು ವರ್ಷಗಳ ಹಿಂದೆ ಕೆಟ್ಟು ಹೋದ ಶುದ್ಧೀಕರಣ ಘಟಕವನ್ನು ದುರಸ್ಥಿ ಪಡಿಸದೇ ಹೋದುದರಿಂದ ಪುರಸಭಾ ವ್ಯಾಪ್ತಿಗೆ ಕೆಸರು ಮಿಶ್ರಿತ ನೀರನ್ನೇ ಕಾರ್ಕಳ ಪುರಸಭೆ ಪೊರೈಕೆ ಮಾಡುತ್ತಿರುವ ಅಘಾತಕಾರಿ ಮಾಹಿತಿ ಹೊರಬಿದ್ದಿದೆ.
ಮುಂಡ್ಲಿ ಡ್ಯಾಂನ ಕುರಿತು ಒಂದಿಷ್ಟು:
ಕಾರ್ಕಳ ಶಾಸಕರಾಗಿದ್ದ ಎಂ.ವೀರಪ್ಪ ಮೊಯಿಲಿ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ದುರ್ಗ ಗ್ರಾಮ ಪಂಚಾಯತ್ ವ್ಯಾಪ್ತಿ ಬಲ್ಮಗುಂಡಿಯ ಮುಂಡ್ಲಿ ಎಂಬಲ್ಲಿ ಕಿಂಡಿಅಣೆಕಟ್ಟು ನಿರ್ಮಾಣಗೊಂಡಿತು. ಇಲ್ಲಿಂದಲೇ ರಾಮಸಮುದ್ರದ ನೀರು ಶುದ್ಧೀಕರಣ ಘಟಕಕ್ಕೆ ನೀರು ಸರಬರಾಜು ಆಗುತ್ತಿತ್ತು. ಆ ಮೂಲಕ ಪುರಸಭಾ ವ್ಯಾಪ್ತಿಗೆ ಕುಡಿಯುವ ನೀರು ಪೊರೈಕೆ ಮಾಡಲಾಗುತ್ತಿದೆ.ಆಂಧ್ರಪ್ರದೇಶದ ಮೂಲದ ವಿದ್ಯುತ್ ಉತ್ಪಾದನ ಘಟಕ ಮುಂಡ್ಲಿಯಲ್ಲಿ ಕಾರ್ಯರಂಭ ಬಳಿಕ ಕಿಂಡಿ ಅಣೆಕಟ್ಟಿಗೆ ಅಳವಡಿಸಲಾಗಿದ್ದ ಮರದ ಗೇಟ್ಗಳನ್ನು ತೆರವು ಗೊಳಿಸಿ ಕಾಂಕ್ರೀಟ್ಕರಣ ತಡೆಗೋಡೆಯನ್ನು ನಿರ್ಮಿಸಲಾಗಿತ್ತು. ಪರಿಣಾಮವಾಗಿ ಮಳೆಗಾಲದಲ್ಲಿ ಪರಿಸರದಲ್ಲಿ ಕೃತಕ ನೆರೆ ಹಾವಳಿಯು ಕಾಡತೊಡಗಿ ಹಲವು ಕೃಷಿ ಭೂಮಿ ಜಲಾವ್ರತಗೊಳ್ಳುತ್ತಿತ್ತು. ಇದರಿಂದ ಕೃಷಿ ಹಾನಿಗೊಳಗಾಗುತ್ತ ಬಂದಿದೆ. ಮಳೆಗಾಲದಲ್ಲಿ ಶೇಖರಣೆಗೊಳುವ ಹೂಳಿನಿಂದಾಗಿ ಬೇಸಿಗೆಗಾಲ ಆರಂಭಗೊಳುತ್ತಿದ್ದಂತೆ ಮುಂಡ್ಲಿ ಡ್ಯಾಂನಲ್ಲಿ ಕುಡಿಯುವ ನೀರಿಗೂ ತಾತ್ವಾರ ಎದುರುಗೊಳ್ಳುತ್ತಿತ್ತು. ಈ ನಡುವೆ ಸ್ವಯಂ ಚಾಲಿತ ಗೇಟ್ನ್ನು ಅಳವಡಿಸಿದರೂ ಅದನ್ನು ಸಮರ್ಪಕವಾಗಿ ಬಳಕೆ ಮಾಡದೇ ಹೋದುದರಿಂದ ಅಕಾಲಿಕ ಮಳೆಗಾಲದ ಸಂದರ್ಭದಲ್ಲಿ ಮಳೆನೀರಿನೊಂದಿಗೆ ಮಿಶ್ರಣಗೊಂಡ ಹೂಳು ಇದೇ ಕಿಂಡಿ ಅಣೆಕಟ್ಟಿನಲ್ಲಿ ಶೇಖರಣೆ ಗೊಂಡಿದೆ.
ಬಲೆಯೇ ಆಧಾರ:
ಮುಂಡ್ಲಿಯಿಂದ ಭಾರೀ ಗಾತ್ರದ ಪೈಪ್ ಮೂಲಕ ಹರಿಸು ಬಂದು ಕೊಳಗಳಲ್ಲಿ ಶೇಖರಣೆಗೊಳ್ಳುವ ನೀರಿನ ಮೇಲ್ಬಾಗದಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಹೊರ ತೆಗೆಯಲು ಬಲೆಯನ್ನು ಕಟ್ಟಿದ ಕೋಲನ್ನು ಬಳಸಲಾಗುತ್ತಿದೆ.
ನೀರಿನ ಮೇಲ್ಭಾಗದಲ್ಲಿ ತೇಲುವ ತ್ಯಾಜ್ಯವನ್ನು ಅಲ್ಲಿನ ಸಿಬ್ಬಂದಿಯ ಸಾಮಾಥ್ಯಕ್ಕೆ ಅನುಗುಣವಾಗಿ ಸಂಗ್ರಹಿಸಿ ಹೊರ ಹಾಕುತ್ತಿದ್ದರೆ ಉಳಿದವುಗಳು ನೇರವಾಗಿ ಪೈಪ್ ಮೂಲಕ ಹಾದುಹೋಗುತ್ತಿದೆ. ಕೆಲವೊಂದು ಸಂದರ್ಭದಲ್ಲಿ ಇದರಿಂದ ಪೈಪ್ನಲ್ಲಿ ಸಂಗ್ರಹವಾಗುವ ತ್ಯಾಜ್ಯದಿಂದಾಗಿ ನೀರು ಸರಬರಾಜುಗೂ ಅಡಚಣೆಯಾಗುತ್ತಿದೆ.
ಅಲರ್ಜಿ ಸಮಸ್ಯೆ ಹದಗೆಡುತ್ತಿರುವ ಆರೋಗ್ಯ:
ಬಹುತೇಕ ಮನೆಗಳಲ್ಲಿ ಹಾಗೂ ವಾಣಿಜ್ಯ ಮಳಿಗೆಗಳಲ್ಲಿ ಪುರಸಭೆಯಿಂದ ಸರಬರಾಜು ಆಗುತ್ತಿರುವ ನೀರನ್ನೇ ಕುಡಿಯಲು ಹಾಗೂ ಬಳಕೆಗೆ ಉಪಯೋಗಿಸಲಾಗುತ್ತಿದೆ. ಆ ನೀರನ್ನು ಸ್ನಾನಕ್ಕೆ ಬಳಸಿದವರ ಪೈಕಿ ಕೆಲವರಿಗೆ ಅಲರ್ಜಿ ಸಮಸ್ಯೆ ಎದುರಾಗಿದೆ. ದೈನಂದಿನ ಆಹಾರ ಸಿದ್ಧತೆಗೆ ಇದೇ ನೀರನ್ನು ಬಳಸಿ ಕೆಲವರಲ್ಲಿ ಆರೋಗ್ಯ ಹದಗೆಟ್ಟಿರುವ ಮಾಹಿತಿ ತಿಳಿದುಬಂದಿದೆ.
ತ್ವರಿತಗತಿಯಿಂದ ಪರಿಹಾರಕ್ಕೆ ಪ್ರಯತ್ನ:
ಅಕಾಲಿಕ ಮಳೆ ಎದುರಾದ ಹಿನ್ನಲೆಯಲ್ಲಿ ಈ ಸಮಸ್ಸೆ ಮತ್ತಷ್ಟು ಬಿಗಡಾಯಿಸಿದೆ. ರಾಮಸಮುದ್ರ ನೀರು ಶುದ್ಧೀಕರಣ ಘಟಕದ ಶುಚಿತ್ವಗೊಳಿಸುವ ಹಾಗೂ ನೀರು ಶುದ್ಧೀಕರಣ ಯಂತ್ರ ಅಳವಡಿಕೆಯ ಕಾಮಗಾರಿಗಾಗಿ ಕೂಡಲೇ ಟೆಂಡರ್ ಆಹ್ವಾನಿಸಲು ಕಾರ್ಕಳ ಪುರಸಭಾ ಆಡಳಿತ ಬದ್ಧವಾಗಿದೆ. - ರೂಪಾ ಶೆಟ್ಟಿ, ಮುಖ್ಯಾಧಿಕಾರಿ ಕಾರ್ಕಳ ಪುರಸಭೆ