ಕುಂದಾಪುರ, ಏ 28 (DaijiworldNews/MS): ಕುಂದಾಪುರ ತಾಲೂಕಿನ ತೆಕ್ಕಟ್ಟೆ ಸಮೀಪದ ಮಾಲಾಡಿ ಎಂಬಲ್ಲಿನ ತೋಟದಲ್ಲಿ ಅರಣ್ಯ ಇಲಾಖೆಯಿಟ್ಟ ಬೋನಿಗೆ ಅಂದಾಜು 2.5 ವರ್ಷದ ಹೆಣ್ಣು ಚಿರತೆ ಬಿದ್ದಿದೆ.
ಮಾಲಾಡಿ ಶ್ರೀ ನಂದಿಕೇಶ್ವರ ದೇವಸ್ಥಾನ ಬಳಿಯ ತೋಟದಲ್ಲಿ ಚಿರತೆ ನಿರಂತರ ಓಡಾಟದ ಹಿನ್ನೆಲೆ ಕಳೆದ ತಿಂಗಳು ಬೋನು ಇಟ್ಟು ನಾಯಿ ಕಟ್ಟಲಾಗಿದ್ದು ಏ. 28 ರ ಗುರುವಾರ ಬೆಳಿಗ್ಗೆ ಚಿರತೆ ಬೋನಿಗೆ ಬಿದ್ದಿರುವುದು ಗಮನಕ್ಕೆ ಬಂದಿದೆ.
ಎಕರೆಗಟ್ಟಲೆ ಇರುವ ತೋಟದ ಈ ಪರಿಸರದಲ್ಲಿ ಅಂಗನವಾಡಿ, ಶಾಲೆ ಹಾಗೂ ಮನೆಗಳಿದೆ. ಕಳೆದ ವರ್ಷವೂ ಇಲ್ಲಿ ನಾಯಿ, ಜಾನುವಾರು, ಸಾಕುಪ್ರಾಣಿಗಳ ಮೇಲೆ ದಾಳಿ ಚಿರತೆ ದಾಳಿ ನಡೆಸಿತ್ತು. ಮಾತ್ರವಲ್ಲ ನಿರಂತರವಾಗಿ ಜನರಿಗೆ ಚಿರತೆ ಕಾಣಿಸಿಕೊಂಡಿತ್ತು. ಚಿರತೆ ಸೆರೆಗೆ ಬೋನಿಟ್ಟು ಕಾರ್ಯಾಚರಣೆ ಕೈಗೊಂಡ ಅರಣ್ಯ ಇಲಾಖೆ ಕಳೆದ ತಿಂಗಳಾಂತ್ಯದಲ್ಲಿ ಬೋನಿಟ್ಟು ಚಿರತೆ ಸೆರೆಗೆ ಮುಂದಾಗಿತ್ತು. ಸ್ಥಳೀಯ ನಿವಾಸಿಗಳಾದ ಸತೀಶ್ ದೇವಾಡಿಗ ಮತ್ತು ಸುರೇಶ್ ಅವರು ಚಿರತೆ ಸೆರೆ ಕಾರ್ಯಾಚರಣೆಗೆ ಇಲಾಖೆ ಇಟ್ಟ ಬೋನಿಗೆ ನಾಯಿ ಕಟ್ಟಿ ಸಹಕಾರ ನೀಡುತ್ತಿದ್ದರು.