ಮಂಗಳೂರು, ಏ 27 (DaijiworldNews/SM): ಕರಾವಳಿ ಪ್ರವಾಸ ಕೈಗೊಂಡ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕರಾವಳಿಯನ್ನು ಹಾಡಿಹೊಗಲಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಕೊಡಗು, ಉತ್ತರ ಕನ್ನಡ, ಮಲನಾಡು ಕರ್ನಾಟಕದ ನಿಸರ್ಗಭರಿತ ಸೌಂದರ್ಯದ ನಾಡು ಎಂದು ಹಾಡಿಹೊಗಲಿದ್ದಾರೆ.
ಮೂಡುಬಿದಿರೆಯಲ್ಲಿ ನಡೆದ ಆಡಳಿತ ಸೌಧ ಉದ್ಘಾಟನೆ ಹಾಗೂ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಸಮಾರಂಭದಲ್ಲಿ ಮಾತನಾಡಿದ ಅವರು, ಕರಾವಳಿ ಅಷ್ಟೇ ಉತ್ತಮ ಗುಣವುಳ್ಳ ಗುಣವಂತರ ನಾಡು, ಸತ್ಯ ನ್ಯಾಯಕ್ಕಾಗಿ ಸದಾ ಜಾಗೃತರಾಗಿ ಹೋರಾಡುವ ನಾಡು. ಹಗಲಿರುಳು ಶ್ರಮವಹಿಸುವ ರೈತರ ನಾಡು. ಕಷ್ಟಪಟ್ಟು ಮೀನು ಹಿಡಿದು ಜಗತ್ತಿಗೆ ಆಹಾರ ಕೊಡುತ್ತಿರುವ ಮೊಗವೀರರ ನಾಡು. ಕಂಬಳ ಎನ್ನುವ ಅದ್ಭುತ ಗ್ರಾಮೀಣ ಕ್ರೀಡೆಯನ್ನು ಜೀವಂತವಿಟ್ಟಿರುವ ನಾಡು. ಗ್ರಾಮೀಣ ಕ್ರೀಡೆಗಳ ಪ್ರೇಮಿಗಳ ನಾಡು, ಜ್ಞಾನದ ಬೀಡು. ಜೈನರ ಕಾಶಿ, ತ್ಯಾಗಮಯಿ ಮಹಾವೀರರ ನಾಡು.
ಆಧುನಿಕ ಭಾರತದ ಸುಂದರವಾಗಿರುವ ನಾಡು. ಅತ್ಯಾಧುನಿಕ ಕಲ್ಪನೆ ಇರುವ, ಅತ್ಯಧಿಕ ಬ್ಯಾಂಕ್ ಕೊಟ್ಟಂತಹ ನಾಡು. ಹೇಳುತ್ತಾ ಹೋದರೆ ಸಮುದ್ರದ ಅಲೆಗಳಂತೆ ಒಂದಾದ ಮೇಲೆ ಒಂದು ಹೇಳಬಹುದು. ಇಂತಹ ನಾಡಿನಲ್ಲಿರುವ ನೀವೇ ಭಾಗ್ಯಶಾಲಿಗಳು ಎಂದು ಕರಾವಳಿ, ಮಲೆನಾಡನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಡಿಹೊಗಳಿದ್ದಾರೆ.