ಮೂಡುಬಿದಿರೆ, ಏ 27 (DaijiworldNews/SM): ರಾಜ್ಯದಲ್ಲಿ ತೀವ್ರ ಪ್ರಮಾಣದಲ್ಲಿ ರೈತರಿಗೆ ಕಾಡುತ್ತಿರುವ ಕುಮ್ಕಿ ಹಾಗೂ ಡೀಮ್ಡ್ ಫಾರೆಸ್ಟ್ ಸಮಸ್ಯೆ ಪರಿಹಾರಕ್ಕೆ ಸರಕಾರ ದಿಟ್ಟ ನಿರ್ಧಾರ ಕೈಗೊಂಡಿದೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.
ಮೂಡಿಬಿದಿರೆಯಲ್ಲಿ ನಡೆದ ಆಡಳಿತ ಸೌಧ ಉದ್ಘಾಟನೆ ಹಾಗೂ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಸಮಾರಂಭದಲ್ಲಿ ಅವರು ಮಾತನಾಡಿದರು. ರಾಜ್ಯದ ರೈತರು ಕಳೆದ ಅನೇಕ ವರ್ಷಗಳಿಂದ ಡೀಮ್ಡ್ ಫಾರೆಸ್ಟ್ ಹಾಗೂ ಕುಮ್ಕಿ ಸಮಸ್ಯೆಯಿಂದ ಬಳಲುತ್ತಿದ್ದರು. ಎಷ್ಟೇ ಮನವಿ ಸಲ್ಲಿಸಿದರೂ ಇದಕ್ಕೆ ಪರಿಹಾರ ಸಿಕ್ಕಿರಲಿಲ್ಲ. ಇದರಿಂದಾಗಿ ಕೃಷಿ ನಡೆಸುವ ರೈತರು ಸಂಕಷ್ಟ ಅನುಭವಿಸುತ್ತಿದ್ದರು. ಆದರೆ, ನಮ್ಮ ಸರಕಾರ ಈ ಸಮಸ್ಯೆ ಪರಿಹಾರಕ್ಕೆ ದಿಟ್ಟ ನಿರ್ಧಾರ ಕೈಗೊಂಡಿದೆ.
ಈಗಾಗಲೇ ಸಿಎಂ ಬಸವರಾಜ್ ಬೊಮ್ಮಾಯಿ ಈ ವಿಚಾರದ ಕುರಿತಂತೆ ದಿಟ್ಟ ನಿರ್ಧಾರ ಕೈಗೊಂಡಿದ್ದು, ಕೆಲವೇ ದಿನಗಳೊಳಗೆ ಇದಕ್ಕೊಂದು ತಾರ್ಕಿಕ ಅಂತ್ಯ ಸಿಗಲಿದೆ ಎಂದು ಅವರು ತಿಳಿಸಿದ್ದಾರೆ.