ಕಾರ್ಕಳ, ಏ 27 (DaijiworldNews/DB): ತಾಲೂಕಿನ ಪ್ರಮುಖ ವ್ಯವಹಾರ ಕೇಂದ್ರವಾಗಿ ಜೋಡುರಸ್ತೆ ಮಾರ್ಪಡು ಆಗಲಿದೆ. ಈ ಪರಿಸರದಲ್ಲಿ ಬ್ಯಾಂಕಿಂಗ್, ವಸತಿ ಸಮುಚ್ಚಯ, ವಸ್ತ್ರ ಮಳಿಗೆ ಸೇರಿದಂತೆ ವಾಣಿಜ್ಯ ಮಳಿಗೆಗಳು ತಲೆ ಎತ್ತಿತ್ತು. ಊರ-ಪರವೂರಿನ ಅಸಂಖ್ಯಾತರು ದೈನಂದಿನ ಕಾರ್ಯಚಟುವಟಿಕೆಗಳಿಗಾಗಿ ಕಾರ್ಕಳದ ಜೋಡುರಸ್ತೆಗೆ ಸಂಪರ್ಕಿಸುತ್ತಿದ್ದಾರೆ. ಈ ಹಿನ್ನಲ್ಲೆಯಲ್ಲಿ ಜೋಡುರಸ್ತೆಯ 600 ಮೀ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಿ, ಪಾದಚಾರಿ ರಸ್ತೆ ನಿರ್ಮಾಣ, ಕಾಂಕ್ರಿಟ್ ,ಚರಂಡಿ ಹಾಗೂ ಅಲಂಕಾರಿಕ ವಿದ್ಯುತ್ ದೀಪಗಳನ್ನು ಅಳವಡಿಸುವ ಕಾಮಗಾರಿಗಳು ನಡೆಯಲಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ವಿ. ಸುನೀಲ್ಕುಮಾರ್ ಹೇಳಿದರು.
6.50 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ಜೋಡುರಸ್ತೆ ಕಾಮಗಾರಿಯ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಸ್ವರ್ಣ ಕಾರ್ಕಳ ಸ್ವಚ್ಛ ಕಾರ್ಕಳ ಘೋಷ ವಾಕ್ಯದಡಿಯಲ್ಲಿ ತಾಲೂಕು ವ್ಯಾಪ್ತಿಯಲ್ಲಿ ಸಮಗ್ರ ಅಭಿವೃದ್ಧಿ ಪಡಿಸುವುದು ಮೊದಲ ಗುರಿಯಾಗಿದೆ ಎಂದು ಇದೇ ಸಂದರ್ಭದಲ್ಲಿ ಸಚಿವ ಸುನೀಲ್ಕುಮಾರ್ ಹೇಳಿದರು.
ಕುಕ್ಕುಂದೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶಶಿಮಣಿ, ಕಾರ್ಕಳ ಪುರಸಭಾ ಅಧ್ಯಕ್ಷೆ ಸುಮಾ, ಉಪಾಧ್ಯಕ್ಷೆ ಪಲ್ಲವಿ ರಾವ್, ಜಿಲ್ಲಾ ಪಂಚಾಯತ್ ನಿಕಟಪೂರ್ವ ಸದಸ್ಯ ಸುಮಿತ್ ಶೆಟ್ಟಿ, ಪೂರ್ಣಿಮಾ ಸಿಲ್ಕ್ಸ್ ಮಾಲಕ ರವಿಪ್ರಕಾಶ್ ಪ್ರಭು, ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ನವೀನ್ ನಾಯಕ್ ಉಪಸ್ಥಿತರಿದ್ದರು.
ರವೀಂದ್ರ ಕುಮಾರ್ ಸ್ವಾಗತಿಸಿದರು. ಜ್ಯೋತಿ ನಿರೂಪಿಸಿದರು.