ಮಂಗಳೂರು, ಏ 27 (DaijiworldNews/DB): ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಭಾಗವಹಿಸಿದ ಕಾರ್ಯಕ್ರಮಕ್ಕೆ ನುಗ್ಗಲು ಕ್ಯಾಂಪಸ್ ಫ್ರಂಟ್ ಕಾರ್ಯಕರ್ತರು ಯತ್ನಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನ ಹಂಪನಕಟ್ಟೆ ಬಳಿ ಪದವಿ ಪೂರ್ವ ಕಾಲೇಜು ಕಟ್ಟಡ ಶಿಲಾನ್ಯಾಸಕ್ಕೆ ಕಾರ್ಯಕ್ರಮಕ್ಕೆ ಸಚಿವರು ಆಗಮಿಸಿದ್ದರು. ಈ ವೇಳೆ ಸಚಿವ ನಾಗೇಶ್ ಕಾರ್ಯಕ್ರಮಕ್ಕೆ ನುಗ್ಗಲು ಸಿಎಫ್ಐ ಕಾರ್ಯಕರ್ತರು ಮುಂದಾಗಿದ್ದಾರೆ. ಆದರೆ ಕಾರ್ಯಕರ್ತರನ್ನು ಪೊಲೀಸರು ರಸ್ತೆಯಲ್ಲೇ ತಡೆದು ನಿಲ್ಲಿಸಿದ್ದಾರೆ. ಕಾರ್ಯಕ್ರಮದ ವೇದಿಕೆಯ ಅನತಿ ದೂರದಲ್ಲಿ ಈ ಘಟನೆ ನಡೆದಿದ್ದು, ಸಮವಸ್ತ್ರ ಹಂಚಿಕೆಯಲ್ಲಿ ಸಚಿವರಿಂದ ಗೋಲ್ ಮಾಲ್ ನಡೆದಿದೆ ಎಂದು ಆರೋಪಿಸಿ ಸಿಎಫ್ಐ ಪ್ರತಿಭಟನೆಗಿಳಿದಿತ್ತು. ಈ ವೇಳೆ ಕಾರ್ಯಕ್ರಮಕ್ಕೆ ನುಗ್ಗುವ ಯತ್ನ ನಡೆದಿದೆ. ಬಿ.ಸಿ. ನಾಗೇಶ್ ಗೋ ಬ್ಯಾಕ್ ಎಂದು ಘೋಷಣೆ ಕೂಗಿ ಧಿಕ್ಕಾರ ಘೋಷಿಸುತ್ತಾ ಕಾರ್ಯಕ್ರಮಕ್ಕೆ ನುಗ್ಗಲು ಯತ್ನಿಸಿದ್ದರು.
ಸದ್ಯ ಮಂಗಳೂರು ಪುರಭವನದ ಆವರಣದಲ್ಲಿ ಸಿಎಫ್ ಐ ಕಾರ್ಯಕರ್ತರನ್ನ ಪೊಲೀಸರು ಕೂಡಿ ಹಾಕಿದ್ದಾರೆ.