ಮಂಗಳೂರು, ಏ 27 (DaijiworldNews/MS): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಇಂದಿನ ಮಂಗಳೂರು ಪ್ರವಾಸ ರದ್ದಾಗಿದೆ ಎಂದು ತಿಳಿದುಬಂದಿದೆ.
ಮುಖ್ಯಮಂತ್ರಿ ಬೊಮ್ಮಾಯಿ ಮಂಗಳೂರಿಗೆ ಬರಲೆಂದು ಬೆಂಗಳೂರಿನಲ್ಲಿ ಏರ್ಪೋರ್ಟ್ ಗೂ ತೆರಳಿದ್ದರು. ಆದರೆ ವಿಮಾನ ವಿಳಂಬದ ಕಾರಣದಿಂದಾಗಿ, ಮಂಗಳೂರು ಪ್ರವಾಸವನ್ನು ರದ್ದುಗೊಳಿಸಿ, ಏರ್ಪೋರ್ಟ್ ನಿಂದ ಗೃಹ ಕಚೇರಿ ಕೃಷ್ಣಾಗೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ವೀಡಿಯೋ ಕಾನ್ಫೆರೆನ್ಸ್ ನಲ್ಲಿ ಪಾಲ್ಗೊಳ್ಳಲು ವಾಪಾಸ್ ತೆರಳಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಮಂಗಳೂರು ಜಿಲ್ಲಾ ಪ್ರವಾಸ ಕೈಗೊಳ್ಳುವ ಹಿನ್ನಲೆಯಲ್ಲಿ, ಪ್ರಧಾನ ಮಂತ್ರಿ ಮೋದಿಯವರೊಂದಿಗೆ ಕೋವಿಡ್ ನಿಯಂತ್ರಣ ವರ್ಚುವಲ್ ಸಭೆಯಲ್ಲಿ ಭಾಗಿಯಾಗಲು ದ.ಕ. ಜಿಲ್ಲಾ ಪಂಚಾಯತ್ ನಲ್ಲಿ ಸಕಲ ವ್ಯವಸ್ಥೆಯನ್ನು ಮಾಡಲಾಗಿತ್ತು
ಆದರೆ ಮಂಗಳೂರಿಗೆ ತೆರಳಬೇಕಿದ್ದಂತ ವಿಮಾನದ ಆಗಮನ ತಡವಾದ ಕಾರಣ, ತಮ್ಮ ಮಂಗಳೂರು ಪ್ರವಾಸವನ್ನು ರದ್ದುಗೊಳಿಸಿ, ಇದೀಗ ಗೃಹ ಕಚೇರಿ ಕೃಷ್ಣಾಗೆ ವಾಪಾಸ್ ಆಗಿದ್ದಾರೆ. ಕೆಲವೇ ಕ್ಷಣಗಳಲ್ಲಿ ಪ್ರಧಾನಿ ಮೋದಿಯವರೊಂದಿಗೆ ಆರಂಭವಾಗುವಂತ ವೀಡಿಯೋ ಕಾನ್ಫೆರೆನ್ಸ್ ನಲ್ಲಿ, ಸಿಎಂ ಕಚೇರಿಯಿಂದಲೇ ಪಾಲ್ಗೊಳ್ಳಲಿದ್ದಾರೆ.
ಇನ್ನು ಇಂದು ವಿವಿಧ ಕಾರ್ಯಕ್ರಮಗಳ ನಿಮಿತ್ತ ಮಧ್ಯಾಹ್ನದ ಬಳಿಕ ಸಿಎಂ ಮೂಡುಬಿದಿರೆಗೆ ಭೇಟಿ ನೀಡಲಿದ್ದಾರೆ. ಹೆಚ್ ಎ ಎಲ್ ನಿಲ್ದಾಣದಿಂದ ಹೆಲಿಕ್ಯಾಪ್ಟರ್ ಮೂಲಕ ಮೂಡುಬಿದಿರೆಯ ಮಹವೀರ್ ಜೈಲ್ ಕಾಲೇಜು ಹೆಲಿಪ್ಯಾಡ್ ನಲ್ಲಿ ಬಂದಿಳಿಯಲಿದ್ದಾರೆ
ಮಧ್ಯಾಹ್ನ 3.20 ಕ್ಕೆ ಗಂಟೆಗೆ ಅನ್ನದಾಸೋಹ ಕಟ್ಟಡದ ಉದ್ಘಾಟನೆ , ಜೈನ್ ಬಸದಿಗೆ ಭೇಟಿ , ಮೂಡಬಿದರೆ ಪ್ರೆಸ್ ಕ್ಲಬ್ನಲ್ಲಿ ನೂತನ ಕಟ್ಟಡಕ್ಕೆ ಶಿಲಾನ್ಯಾಸ , ಮೂಡಬಿದಿರೆ ತಾಲೂಕು ಆಡಳಿತಸೌಧ ಉದ್ಘಾಟನೆ ಹಾಗೂ ಮುಲ್ಕಿ ವಿಧಾನಸಭೆ ಕ್ಷೇತ್ರದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಹೀಗೆ ಹಲವು ಕಾರ್ಯಕ್ರಮಗಳಲ್ಲಿ ಸಿಎಂ ಭಾಗವಹಿಸಿ , ಸಂಜೆ 6.50 ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ವಿಮಾನದ ಮೂಲಕ ಹಿಂತಿರುಗಲಿದ್ದಾರೆ.