ಮಂಗಳೂರು, ಏ 27 (DaijiworldNews/MS): ಬಂಟ್ವಾಳದ ಕಾಲೇಜೊಂದರ ಉಪನ್ಯಾಸಕಿಯ ಬಗ್ಗೆ ಮಾನಹಾನಿಕರ ಪತ್ರ ಬರೆದು ಮಾನಸಿಕ ಕಿರುಕುಳ ನೀಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಕಸ್ಟಡಿಯಲ್ಲಿದ್ದ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಬಂಟ್ವಾಳ ಸಿದ್ದಕಟ್ಟೆಯ ಮೇಗಿನ ಉಳಿರೋಡಿ ನಿವಾಸಿ ಪ್ರದೀಪ್ ಪೂಜಾರಿ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ತಾರಾನಾಥ (32) ನ್ಯಾಯಾಲಯ ಜಾಮೀನು ನೀಡಿದೆ.
ಇನ್ನೋರ್ವ ಆರೋಪಿ ಕಾಲೇಜೊಂದರ ಸಂಚಾಲಕ ಪ್ರಕಾಶ್ ಶೆಣೈ ಗೆ ನ್ಯಾಯಾಲಯ ಕಳೆದ ಶುಕ್ರವಾರ ಜಾಮೀನು ನೀಡಿತ್ತು. ಉಳಿದ ಇಬ್ಬರು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಸಿಸಿಬಿ ಪೊಲೀಸರು ಮರಳಿ ಕಸ್ಟಡಿಗೆ ಪಡೆದಿದ್ದರು.
ಈ ಮೂವರು ಆರೋಪಿಗಳು ಹಾಗೂ 58 ವರ್ಷದ ಉಪನ್ಯಾಸಕಿ ಬಂಟ್ವಾಳದಲ್ಲಿ ಕಾಲೇಜೊಂದರಲ್ಲಿ ಸಹೋದೋಗ್ಯಿಗಳಾಗಿದ್ದರು. ನಾಲ್ಕು ವರ್ಷಗಳ ಹಿಂದೆ ಕಾಲೇಜು ಆಡಳಿತ ಮಂಡಳಿಯೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಡೆಪ್ಯೂಟೇಷನ್ ನಲ್ಲಿ ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಆ ಬಳಿಕ ಆರೋಪಿಗಳು ವಿವಿಧ ಕಡೆಯ ಪಬ್ಲಿಕ್ ಟಾಯ್ಲೆಟ್ನಲ್ಲಿ ಈ ಉಪನ್ಯಾಸಕಿ ಫೋನ್ ನಂಬರ್ ಹಾಗೂ ಇ-ಮೇಲ್ ಐಡಿ ಹಾಕಿದ್ದರು. 10 ದಿನಗಳ ಅವಧಿಯಲ್ಲಿ ಸುಮಾರು 800 ಅಶ್ಲೀಲ ಕರೆಗಳು ಬಂದಿದ್ದು, ಕಿರುಕುಳ ಸಹಿಸಿಕೊಳ್ಳಲಾಗದೆ ಉಪನ್ಯಾಸಕಿ ಪೊಲೀಸರಿಗೆ ದೂರು ದಾಖಲಿಸಿದಾಗ ಆರೋಪಿಗಳ ಕೃತ್ಯ ಬೆಳಕಿಗೆ ಬಂದಿತ್ತು.