ಕುಂದಾಪುರ , ಏ 27 (DaijiworldNews/MS): ಮನೆಯಂಗಳದ ಬದಿಯಲ್ಲಿ ಮರಕ್ಕೆ ಸೀರೆ ಕಟ್ಟಿ ಜೋಕಾಲಿ ಆಡುತ್ತಿದ್ದ ಬಾಲಕಿಗೆ ಕಾರು ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ಕೋಟೇಶ್ವರ ನಿರಸ್ವಾಲೆ ರಸ್ತೆಯ ಬೆಟ್ಟುಮನೆ ಎಂಬಲ್ಲಿ ಎ.25ರಂದು ಅಪರಾಹ್ನ ವೇಳೆ ನಡೆದಿದೆ.
ಮೃತರನ್ನು ಬೀಜಾಡಿಯ ಬೆಟ್ಟುಮನೆ ನಿವಾಸಿ ಸದಾನಂದ ಮತ್ತು ಅನಿತಾ ದಂಪತಿ ಪುತ್ರಿ ಪ್ರಾಧಾನ್ಯ (9) ಎಂದು ಗುರುತಿಸಲಾಗಿದೆ.
ಬೇಸಿಗೆ ರಜೆಯಾದ್ದರಿಂದ ಮನೆಯಲ್ಲಿ ತುಂಬಾ ಮಕ್ಕಳಿದ್ದು, ಎಲ್ಲರು ಮನೆಯ ಅಂಗಳದಲ್ಲಿ ಮರಕ್ಕೆ ಸೀರೆಯಿಂದ ಜೋಕಾಲಿ ಕಟ್ಟಿ ಕುಳಿತು ಆಟ ಆಡುತ್ತಿದ್ದರು. ಆಗ ಇವರ ಸಂಬಂಧಿಕ ಸಂತೋಷ್, ಕಾರನ್ನು ಒಮ್ಮಲೇ ನಿರ್ಲಕ್ಷತನದಿಂದ ಅತೀ ವೇಗವಾಗಿ ಮುಂದಕ್ಕೆ ಚಲಾಯಿಸಿದ ಪರಿಣಾಮ ಕಾರು ಜೋಕಾಲಿ ಆಡುತ್ತಿದ್ದ ಪ್ರಾದಾನ್ಯಳಿಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ.
ಇದರಿಂದ ಗಂಭೀರವಾಗಿ ಗಾಯಗೊಂಡ ಪ್ರಾಧಾನ್ಯ ಅವರನ್ನು ಕೊಟೇಶ್ವರ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದು ಅಲ್ಲಿ ಬಾಲಕಿ ಮೃತಪಟ್ಟಿದ್ದಾಳೆಂದು ವೈದ್ಯರು ಘೋಷಿಸಿದ್ದಾರೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ