ಮಂಗಳೂರು, ಏ 26 (DaijiworldNews/MS): ಕರಾವಳಿಯ ಮುಂಚೂಣಿ ಟಿವಿ ವಾಹಿನಿ "ದಾಯ್ಜಿವಲ್ಡ್" ನಲ್ಲಿ ಪನಾಮ ಕಾರ್ಪೊರೇಷನ್ ಲಿಮಿಟೆಡ್ ಪ್ರಾಯೋಜಕತ್ವದಲ್ಲಿ ಆರಂಭವಾದ "ಕಾಮಿಡಿ ರಾಜೆ/ ರಾಣಿ " ಹಾಸ್ಯ ರಿಯಾಲಿಟಿ ಶೋ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದು, ಇದೀಗ ಕಾಮಿಡಿ ರಾಜೆ ಪಟ್ಟ ಯಾರು ಒಲಿಯಲಿದೆ ಎನ್ನುವ ಕುತೂಹಲ ಮೂಡಿದೆ.
ಸುಪ್ತ ಪ್ರತಿಭೆಗಳಿಗೆ ಮುಕ್ತ ವೇದಿಕೆಯನ್ನು ಕಲ್ಪಿಸಿ ಕೊಟ್ಟ ಈ ವೇದಿಕೆಗೆ ಆರಂಭದಲ್ಲಿ 250 ಕ್ಕೂ ಹೆಚ್ಚು ಸ್ಪರ್ಧಿಗಳು ಆಡಿಷನ್ ಕೊಟ್ಟಿದ್ದು ಅದರಲ್ಲಿ 30 ಮೊದಲ ಸುತ್ತಿಗೆ ಆಯ್ಕೆ ಮಾಡಲಾಗಿತ್ತು. ಹಲವಾರು ಸುತ್ತಿನ ಬಳಿಕ ಇದೀಗ ಫೈನಲ್ ಹಂತಕ್ಕೆ 5 ಪ್ರತಿಭಾನ್ವಿತ ಕಲಾವಿದರಾದ ಹರ್ಷಿತ್ ಶೆಟ್ಟಿ ಕೌಡೂರು ಗುತ್ತು ,ಸಂದೇಶ್ ಬೊಳ್ಳೂರು ,ಪ್ರಜ್ವಲ್ ಭಂಡಾರಿ ,ಸಂದೀಪ್ ಆಚಾರ್ಯ ,ದಿನೇಶ್ ಕುಂಪಲ ತಮ್ಮ ಅಂತಿಮ ಸ್ಪರ್ಧೆಗೆ ಅಣಿಯಾಗಿದ್ದಾರೆ.
ಈ ಕಾರ್ಯಕ್ರಮದ ತೀರ್ಪುಗಾರರಾಗಿ 'mad in kudla' ಖ್ಯಾತಿಯ ಅರ್ಪಿತ್ ಇಂದ್ರವರ್ಧನ್ ಅವರು ತಮ್ಮ ನಗುವಿನ ಮೂಲಕ ಮೆರುಗನ್ನು ಹೆಚ್ಚಿಸಿದ್ದಾರೆ.ಅದೇ ರೀತಿ ಈ ಕಾರ್ಯಕ್ರಮದಲ್ಲಿ ತುಳುನಾಡಿನ ಹಾಸ್ಯ ದಿಗ್ಗಜ ಪ್ರಶಾಂತ್.ಸಿ ಕೆ ಇವರು ಬಗೆ ಬಗೆಯ ಪಾತ್ರದ ಮೂಲಕ ಈ ಕಾರ್ಯಕ್ರಮದಲ್ಲಿ ಮಿಂಚಿದ್ದಾರೆ
ಇದರ ಅಂತಿಮ ಸ್ಪರ್ಧೆಯೂ ಇದೇ ಏಪ್ರಿಲ್ 30ರಂದು ಸಂಜೆ 6;00 ಗಂಟೆಗೆ ನಡೆಯಲಿದ್ದು , ನಗರದ ಡಾನ್ ಬೋಸ್ಕೊ ಹಾಲ್ ನಲ್ಲಿ ನಡೆಯಲಿದೆ. ಹೆಸರಾಂತ ಕಲಾವಿದರು ಹಾಗೂ ಚಿತ್ರ ತಂಡಗಳು ಈ ಫಿನಾಲೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ವೀಕ್ಷಕರಿಗೂ ಮುಕ್ತ ಪ್ರವೇಶವನ್ನು ಕಲ್ಪಿಸಲಾಗಿದೆ.