ಮಂಗಳೂರು, ಏ 26 (DaijiworldNews/HR): ಪೊಲೀಸ್ ಠಾಣೆಯಲ್ಲಿ ಮೂವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಜ್ಪೆ ಪೊಲೀಸ್ ಇನ್ಸ್ಪೆಕ್ಟರ್ ಪಿ.ಜಿ.ಸಂದೇಶ್ ಮತ್ತು ಅದೇ ಠಾಣೆಯ ಇತರ ಮೂವರು ಸಿಬ್ಬಂದಿಯನ್ನು ಇಲಾಖಾ ವಿಚಾರಣೆಯೊಂದಿಗೆ ಅಮಾನತುಗೊಳಿಸಿ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಆದೇಶಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಎನ್.ಶಶಿಕುಮಾರ್, ಕಟೀಲು ಮೂಲದ ಮೂವರನ್ನು ನಿಂದಿಸಿ ಬಜ್ಪೆ ಠಾಣೆಗೆ ಕರೆದೊಯ್ದು ಬಜ್ಪೆ ಇನ್ಸ್ಪೆಕ್ಟರ್ ಸಂದೇಶ್ ಮತ್ತು ಇತರ ಮೂವರು ಪೊಲೀಸರು ಹಲ್ಲೆ ನಡೆಸಿದ್ದು, ಎಸಿಪಿ ಮಹೇಶ್ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆದಿದೆ. ಇಬ್ಬರು ವೆನ್ಲಾಕ್ ಹಾಗೂ ಒಬ್ಬರು ಕಟೀಲಿನ ಸಂಜೀವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ದೇಹದ ಮೇಲೆ ಗಾಯದ ಗುರುತುಗಳು ಕಂಡುಬಂದಿವೆ ಎಂದರು.
ಬಜ್ಪೆ ಇನ್ಸ್ಪೆಕ್ಟರ್ ಸಂದೇಶ್ ಮತ್ತು ಇತರ ಮೂವರು ಸಿಬ್ಬಂದಿಗಳಾದ ಪ್ರವೀಣ್, ಸುನೀಲ್ ಮತ್ತು ಸೈಯದ್ ಇಮ್ತಿಯಾಜ್ ಅವರನ್ನು ಇಲಾಖಾ ವಿಚಾರಣೆಯೊಂದಿಗೆ ಅಮಾನತುಗೊಳಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಹರಿರಾಮ್ ಶಂಕರ್ ಅವರಿಂದ ವಿವರವಾದ ವಿಚಾರಣೆಯ ವರದಿಯನ್ನು ಶೀಘ್ರದಲ್ಲೇ ನಿರೀಕ್ಷಿಸಲಾಗಿದೆ ಎಂದಿದ್ದಾರೆ.
ಈ ಘಟನೆ ಮೂರು ದಿನಗಳ ಹಿಂದೆ ನಡೆದಿದ್ದು, ವಿವರವಾದ ವಿಚಾರಣೆಯ ನಂತರ ನಾವು ಪೊಲೀಸ್ ಸಿಬ್ಬಂದಿಯ ತಪ್ಪು ಇರುವುದರಿಂದ ಅವರನ್ನು ಅಮಾನತುಗೊಳಿಸಲಾಯಿತು ಎಂದು ಹೇಳಿದರು.
ಕಟೀಲು ದೇವಸ್ಥಾನದ ಸುತ್ತಮುತ್ತಲಿನ ಕೆಲವು ಅಂಗಡಿಗಳನ್ನು ಕಳೆದ 4-5 ತಿಂಗಳ ಹಿಂದೆ ಸಹಾಯಕ ಆಯುಕ್ತರು(ಎಸಿ) ತೆರವು ಮಾಡಿ ಆದೇಶ ಹೊರಡಿಸಿದ್ದರೂ ಜಾರಿಯಾಗಿಲ್ಲ. ಎಸಿ ಅಂಗಡಿಗಳನ್ನು ತೆರವು ಮಾಡಿದ ನಂತರವೂ ಕೆಲವು ಅಂಗಡಿಗಳು ಕಾರ್ಯನಿರ್ವಹಿಸುತ್ತಿವೆ. ಮೂಡುಬಿದಿರೆಯ ವ್ಯಕ್ತಿಯೊಬ್ಬರು ಒಂದು ಮುಂಜಾನೆ ಅಂಗಡಿಯಲ್ಲಿ ತೆಂಗಿನಕಾಯಿಯನ್ನು ಇಳಿಸುತ್ತಿದ್ದಾಗ ಇಬ್ಬರು ವ್ಯಕ್ತಿಗಳು ಅಂಗಡಿಯನ್ನು ಮುಚ್ಚಲಾಗಿದೆ ಮತ್ತು ಕಾರ್ಯನಿರ್ವಹಿಸಬಾರದು ಹೇಳಿದ್ದು, ಈ ಬಗ್ಗೆ ಅಂಗಡಿಯ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಸಂಬಂಧ ಪೊಲೀಸರು ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದು,. ವಿಚಾರಣೆ ವೇಳೆ ವ್ಯಕ್ತಿಗಳು ಪ್ರತಿಕ್ರಿಯಿಸದೇ ಅನುಚಿತವಾಗಿ ವರ್ತಿಸಿದ್ದರಿಂದ ಹಲ್ಲೆ ನಡೆಸಿರುವುದು ನಮ್ಮ ತನಿಖೆಯಲ್ಲಿ ತಿಳಿದು ಬಂದಿದೆ. ಅವರನ್ನು ಬಿಡಿಸಲು ಠಾಣೆಗೆ ತೆರಳಿದ ಮತ್ತೊಬ್ಬನ ಮೇಲೂ ಪೊಲೀಸ್ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ.
ಪೊಲೀಸ್ ಠಾಣೆಗೆ ಬರುವವರು ಅಥವಾ ಯಾವುದೇ ಪ್ರಕರಣಗಳ ಶಂಕಿತ ವ್ಯಕ್ತಿಗಳೊಂದಿಗೆ ಸಾರ್ವಜನಿಕರೊಂದಿಗೆ ಉತ್ತಮವಾಗಿ ವರ್ತಿಸುವಂತೆ ನಾವು ಎಲ್ಲಾ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಗಳಿಗೆ ಸೂಚನೆ ನೀಡಿದ್ದು, ಅಂತಹ ಘಟನೆಗಳು ನಡೆದರೆ ಶಿಸ್ತು ಕ್ರಮವಾಗಿ ಸಂಬಂಧಪಟ್ಟ ಅಧಿಕಾರಿಗಳು ಅಥವಾ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡುತ್ತೇವೆ ಎಂದು ತಿಳಿಸಿದ್ದಾರೆ.