ಕಡಬ, ಏ 26 (DaijiworldNews/MS): ಕಡಬ ತಾಲೂಕಿನ, ರಾಮಕುಂಜ ಗ್ರಾಮದ ಆತೂರು-ಕುಂಡಾಜೆಯ ಸರ್ಕಾರಿ ಗೇರುಬೀಜದ ತೋಟದಲ್ಲಿ ಅಪರೂಪದ ಬೃಹತ್ ಶಿಲಾಯುಗದ ಗುಹಾ ಸಮಾಧಿಯೊಂದು ಪತ್ತೆಯಾಗಿದೆ.
ಶಿರ್ವದ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಇತಿಹಾಸ ಮತ್ತು ಪುರಾತತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಟಿ. ಮುರುಗೇಶಿ ಅವರು ಸ್ಥಳಕ್ಕೆ ಭೇಟಿ ನೀಡಿ ತನ್ನ ವಿದ್ಯಾರ್ಥಿಗಳ ನೆರವಿನೊಂಡಿಗೆ ಪುರಾತನ ಗುಹಾ ಸಮಾಧಿ ಕುರಿತು ಅಧ್ಯಯನ ನಡೆಸಿದ್ದಾರೆ.
ದೊಡ್ಡ ವೃತ್ತವನ್ನು ಕೆಂಪು ಮುರ ಕಲ್ಲಿನ ಮೇಲೆ ರಚಿಸಿ ಸಮಾಧಿ ಇರುವನ್ನು ಗುರುತಿಸಿರುವುದು ಕಡಬದ ಗುಹಾ ಸಾಮಾಧಿಯ ವಿಶೇಷವಾಗಿದೆ. ಗುಹಾ ಸಮಾಧಿಗಳು, ಬೃಹತ್ ಶಿಲಾಯುಗ ಕಾಲದಲ್ಲಿ ರಚಿಸಲಾದ ಸಮಾಧಿಗಳಾಗಿದ್ದು, ಸಮಾಧಿಯ ಮಧ್ಯಭಾಗದಲ್ಲಿ ಸುಮಾರು ಎರಡರಿಂದ ಮೂರು ಅಡಿ ವ್ಯಾಸದ ರಂಧ್ರವನ್ನು ಸುಮಾರು ಒಂದು ಮೀಟರ್ ಆಳದವರೆಗೆ ಸಿಲಿಂಡರ್ ಆಕಾರದಲ್ಲಿ ಕೆಂಪು ಮುರಕಲ್ಲಿನ ಭೂಪಾತಳಿಯಲ್ಲಿ ಕೊರೆಯಲಾಗಿದೆ. ಈ ಪ್ರವೇಶದ್ವಾರವನ್ನು ಆಯತಾಕಾರದಲ್ಲಿ ಬಾಗಿಲ ದಾರಂದಂತೆ ರಚಿಸಲಾಗಿರುತ್ತದೆ. ಆದರೆ, ಎರಡೂ ಕಡೆ ಸಮಾಧಿಯ ಮಧ್ಯಭಾಗದಲ್ಲಿ ಎರಡು ಅಥವಾ ಮೂರು ಅಡಿಯ ವ್ಯಾಸದ ರಂಧ್ರ ಸಾಮಾನ್ಯವಾಗಿ ಕಂಡು ಬರುತ್ತದೆ
ಮೇಲೆ ಗುರುತಿಸಲೆಂದು ಮಾಡಿರುವ ವೃತ್ತದ ವಿಸ್ತಾರ ಸುಮಾರು ಏಳು ಅಡಿಯಾಗಿದ್ದು, ಕೆಳಗಿನ ಗುಹೆಯೂ ಏಳು ಅಡಿ ವಿಸ್ತಾರವಾಗಿದೆ. ಕೇರಳ ಮತ್ತು ಕರ್ನಾಟಕದ ಗುಹಾ ಸಮಾಧಿಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ರಂಧ್ರ, ಕಡಬದ ಗುಹಾ ಸಮಾಧಿಯಲ್ಲಿಲ್ಲ. ಆದ್ದರಿಂದ, ಕಡಬದ ಸಮಾಧಿ ಒಂದು ಅಪರೂಪದ ಹೊಸ ಮಾದರಿಯಾಗಿದೆ. ಗುಹೆಯ ಮಧ್ಯಭಾಗದಲ್ಲಿ ಅಗ್ನಿಕುಂಡವನ್ನು ಹೋಲುವ ಒಂದು ಗುಂಡಿ ಕಂಡು ಬಂದಿದ್ದು, ಇದೂ ಸಹ ಒಂದು ವಿಶೇಷ ಅಂಶವಾಗಿದೆ. ಸಮಾಧಿ ಅಧ್ಯಯನದ ಸಂದರ್ಭದಲ್ಲಿ ನಿಶ್ಚಿತ್ ಗೋಳಿತ್ತಡಿ, ಯೂಸೂಫ್ ಹೈದರ್ ನೆರವು ನೀಡಿದ್ದು ಈ ಸಮಾಧಿಯನ್ನು ಬೆಳಕಿಗೆ ತರುವಲ್ಲಿ ವಿದ್ಯಾರ್ಥಿಗಳಾದ ಶ್ರೇಯಸ್, ಗೌತಮ್, ಶಾರೀಕ್, ಕಾರ್ತಿಕ್, ವಿಶಾಲ್ ರೈ ಮತ್ತು ದಿಶಾಂತ್ ಸಹಕರಿಸಿದ್ದಾರೆ.