ಮಂಗಳೂರು, ಏ 26 (DaijiworldNews/MS): ಒಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕುತ್ತಿಗೆಯಿಂದ ಸರ ಸುಲಿಗೆ ಮಾಡಿ ಪರಾರಿಯಾಗುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 18 ಗ್ರಾಂ ತೂಕದ 02 ಚಿನ್ನದ ಮಾಂಗಲ್ಯ ಸರ ಮತ್ತು ಕೃತ್ಯಕ್ಕೆ ಉಪಯೋಗಿಸಿದ ಸುಮಾರು 50 ಸಾವಿರ ರೂ ಮೌಲ್ಯದ 2 ದ್ವಿಚಕ್ರ ವಾಹನಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ವಾಮಂಜೂರು ಅರೀಫ್ (26), ಬೊಂದೇಲ್ ನ ಮೊಹಮ್ಮದ್ ಹನೀಫ್ ( 36 ) ಅಬ್ದುಲ್ ಸಮದ್ ಪಿ.ಪಿ. ಮತ್ತು ಮೊಹಮ್ಮದ್ ರಿಯಾಝ್ ಎಂದು ಗುರುತಿಸಲಾಗಿದೆ.
ಏ.12ರಂದು ನೀರುಮಾರ್ಗ ಗ್ರಾಮದ ಪಾಲ್ದನೆ ಎಂಬಲ್ಲಿ ಒಬ್ಬಂಟಿಯಾಗಿ ನಡೆದು ಹೋಗುತ್ತಿದ್ದ ಮಮತಾ ಅವರ ಕುತ್ತಿಗೆಯಲ್ಲಿ 8 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಬೈಕ್ ನಲ್ಲಿ ಬಂದು ದಾರಿ ಕೇಳುವ ನೆಪದಲ್ಲಿ ಕಸಿದುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ನಡೆಸಿದ ಪೊಲೀಸರು ಮೊದಲು ಸರ ಸುಲಿಗೆ ಮಾಡಿದ ವಾಮಂಜೂರು ಅರೀಫ್ , ಮೊಹಮ್ಮದ್ ಹನೀಫ್ ಇವರನ್ನು ಬಂಧಿಸಿದ್ದರು . ಅರೀಫ್ ವಿರುದ್ಧ ಈಗಾಗಲೇ ಮಂಗಳೂರು ಗ್ರಾಮಾಂತರ , ಕಂಕನಾಡಿ ನಗರ , ಕಾವೂರು , ಬಜಪೆ ಮೂಡಬಿದ್ರೆ , ಬಂಟ್ವಾಳ ಗ್ರಾಮಾಂತರ , ಬಂಟ್ವಾಳ ನಗರ ಪೊಲೀಸು ಠಾಣೆಗಳಲ್ಲಿ ಸುಲಿಗೆ , ಕೊಲೆ ಯತ್ನ , ಮನೆ ಕಳ್ಳತನ , ಸಾಮಾನ್ಯ ಕಳ್ಳತನದಂತಹ ಒಟ್ಟು 18 ಪ್ರಕರಣಗಳು ದಾಖಲಾಗಿ , ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿವೆ. ಹನೀಫ್ ವಿರುದ್ಧ ಈಗಾಗಲೇ ಬಜಪೆ ಪೊಲೀಸ್ ಠಾಣೆಯಲ್ಲಿ 2016 ರಲ್ಲಿ 1 ಸುಲಿಗೆ ಪ್ರಕರಣ ದಾಖಲಾಗಿರುತ್ತದೆ.
ಆರೋಪಿ ಮೊಹಮ್ಮದ್ ಹನೀಫ್ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೆಲರೈ ಎಂಬಲ್ಲಿ ಪಾರ್ಕ್ ಮಾಡಿದ್ದ ಒಂದು ಆಕ್ಸಿಸ್ ಸ್ಕೂಟರ ನ್ನು ಕಳವು ಮಾಡಿ ಅದೇ ದ್ವಿಚಕ್ರವಾಹನವನ್ನು ಉಪಯೋಗಿಸಿ , ಕಾವೂರು ಪೊಲೀಸು ಠಾಣಾ ವ್ಯಾಪ್ತಿಯ ಬೊಲ್ದುಗುಡ್ಡೆ ಎಂಬಲ್ಲಿ ಮಹಿಳೆಯ ಕತ್ತಿನಲ್ಲಿದ್ದ ಸುಮಾರು 10 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ದಾರಿ ಕೇಳುವ ನೆಪದಲ್ಲಿ ಸುಲಿಗೆ ಮಾಡಿರುವುದು ತನಿಖೆಯಲ್ಲಿ ತಿಳಿದು ಬಂದಿದೆ.
ಸುಲಿಗೆ ಮಾಡಿದ ಎರಡು ಮಾಂಗಲ್ಯ ಸರಗಳನ್ನು ಖರೀದಿಸಿದ ಕಾವೂರಿನ ನಕ್ಷತ್ರ ಜುವೆಲ್ಲರ್ನ ಮಾಲೀಕರಾದ ಅಬ್ದುಲ್ ಸಮದ್ ಪಿ.ಪಿ. ಮತ್ತು ಮೊಹಮ್ಮದ್ ರಿಯಾಝ್ ಮಾರಿದ್ದರು. ಈ ಹಿನ್ನಲೆಯಲ್ಲಿ ಇವರನ್ನು ದಸ್ತಗಿರಿ ಮಾಡಲಾಗಿದ್ದು, ನಾಲ್ವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.